Daily Horoscope

Select Your Language

Notifications

webdunia
webdunia
webdunia
webdunia

ರೈತರ ಸಮಸ್ಯೆ ಅರ್ಥಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರಕ್ಕೆ ವ್ಯವಧಾನವೇ ಇಲ್ಲ: ಬಿ.ವೈ. ವಿಜಯೇಂದ್ರ

BY Vijayendra
ಶಿಕಾರಿಪುರ: ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡುವ ಬದಲು ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
 
ಶಿಕಾರಿಪುರದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ ಎಂದರು. ಗಾಡ್ಗಿಲ್ ಮತ್ತು ಕಸ್ತೂರಿರಂಗನ್ ಸಮಿತಿಗಳ ವರದಿಗಳ ಹಿನ್ನೆಲೆಯಲ್ಲಿ ಕಾಡಂಚಿನ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ ವಿಜಯೇಂದ್ರ, ಈ ವರದಿಗಳು ಯಾವುದೇ ರಾಜ್ಯದ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಾತ್ರ ರಚನೆಯಾದವು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
 
ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಗಾಡ್ಗಿಲ್ ಸಮಿತಿ ಹಾಗೂ ಕಸ್ತೂರಿರಂಗನ್ ಸಮಿತಿಗಳನ್ನು ರಚಿಸಲಾಗಿತ್ತು. ಇಂದು ಈ ವರದಿಗಳ ಪರಿಣಾಮವಾಗಿ ಕಾಡಂಚಿನ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. “ಮಧು ಬಂಗಾರಪ್ಪನವರೇ, ನೀವು ಹೋರಾಟ ಮಾಡಬೇಕಾದರೆ ಮೊದಲು ನೀವು ರಾಜ್ಯ ಸರ್ಕಾರದ ಸಚಿವರು ಎಂಬ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು” ಎಂದು ವಿಜಯೇಂದ್ರ ಹೇಳಿದರು.
 
ಶಿಕಾರಿಪುರ ಸೇರಿದಂತೆ ಈ ಭಾಗದ ರೈತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಗಮನ ಹರಿಸಿಲ್ಲ ಎಂದು ವಿಜಯೇಂದ್ರ ಟೀಕಿಸಿದರು. “ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ವ್ಯವಧಾನವೂ ಇಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಅವರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ” ಎಂದು ಅವರು ಆರೋಪಿಸಿದರು.
 
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಅವಧಿಯನ್ನು ಪ್ರಸ್ತಾಪಿಸಿದ ವಿಜಯೇಂದ್ರ, ಗ್ಯಾರಂಟಿ ಯೋಜನೆಗಳ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಮಾತನಾಡಲಾಗುತ್ತಿದೆ. ಆದರೆ ರಾಜ್ಯದ ಬಡವರು ಮತ್ತು ದುರ್ಬಲ ವರ್ಗಗಳ ಮೂಲಭೂತ ಅಗತ್ಯಗಳ ವಿಚಾರದಲ್ಲಿ ಸರ್ಕಾರದ ಸಾಧನೆ ಏನು ಎಂದು ಪ್ರಶ್ನಿಸಿದರು.
 
“ಕಳೆದ ಮೂರುವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಒಬ್ಬ ಬಡವನಿಗೆ ಮನೆ ನೀಡಲು ಸಾಧ್ಯವಾಗಿಲ್ಲ. ಒಂದು ಗಂಗಾ ಕಲ್ಯಾಣ ಯೋಜನೆಯನ್ನು ನೀಡಲು ಸಾಧ್ಯವಾಗಿಲ್ಲ. ಅರ್ಹ ವಿಕಲಚೇತನರಿಗೆ ಪಿಂಚಣಿ ನೀಡುವುದಕ್ಕೂ ಸರ್ಕಾರ ಮುಂದೆ ಬರುತ್ತಿಲ್ಲ” ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಆದ್ಯತೆಗಳು ಜನರ ನೈಜ ಸಮಸ್ಯೆಗಳಿಗಿಂತ ರಾಜಕೀಯ ಘೋಷಣೆಗಳ ಕಡೆಗೆ ಸೀಮಿತವಾಗಿವೆ ಎಂದು ಅವರು ಟೀಕಿಸಿದರು.
 
ಪ್ರತಿಭಟನೆಯಲ್ಲಿ ಕಾರ್ಯಕರ್ತರು ಹಾಗೂ ರೈತರು ತೋರಿದ ಶಿಸ್ತು ಮತ್ತು ಹೋರಾಟದ ಮನೋಭಾವವನ್ನು ವಿಜಯೇಂದ್ರ ಶ್ಲಾಘಿಸಿದರು. “ಕಳೆದ ಮೂರುವರೆ ಗಂಟೆಗಳಿಂದ ಕಾರ್ಯಕರ್ತರಲ್ಲಿ ಒಬ್ಬರೂ ತಮ್ಮ ಕುರ್ಚಿಯಿಂದ ಎದ್ದಿಲ್ಲ. ಇದು ಶಿಕಾರಿಪುರದ ಮಣ್ಣಿನ ಗುಣ, ಇದು ಹೋರಾಟದ ಗುಣ” ಎಂದು ಅವರು ಹೇಳಿದರು.
 
ಶಿಕಾರಿಪುರದ ಜನತೆ ಹಾಗೂ ಬಿಜೆಪಿ ಕಾರ್ಯಕರ್ತರು ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುವ ಶಕ್ತಿ ಹೊಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
 
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. “ಶಿಕಾರಿಪುರ ತಾಲೂಕಿನಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಡೆದ ಅಭಿವೃದ್ಧಿಯ ಗತವೈಭವವನ್ನು ಜನರು ನೋಡಿದ್ದಾರೆ. ಅದೇ ರೀತಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರದಲ್ಲಿ ಮತ್ತೊಮ್ಮೆ ಅಭಿವೃದ್ಧಿಯ ಕೆಲಸಗಳು ನಡೆಯುವಂತಹ ಒಳ್ಳೆಯ ದಿನಗಳನ್ನು ತರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. ರೈತರ ಸಮಸ್ಯೆಗಳು, ನೀರಾವರಿ, ಬಡವರು, ವಿಕಲಚೇತನರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಜನರ ಪರವಾಗಿ ಹೋರಾಟ ಮುಂದುವರಿಸಲಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಸಂಪುಟ ಸಭೆಯ ಐತಿಹಾಸಿಕ ತೀರ್ಮಾನ: ತುಳು ರಾಜ್ಯದ 2ನೇ ಆಡಳಿತ ಭಾಷೆ