Select Your Language

Notifications

webdunia
webdunia
webdunia
webdunia

ದೇಶದ್ರೋಹಿಗಳಿಗೆ ಸಾಥ್ ನೀಡುತ್ತಿರುವ ಕಾಂಗ್ರೆಸ್ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಮಂಗಳವಾರ, 15 ಅಕ್ಟೋಬರ್ 2024 (13:05 IST)
ಬೆಂಗಳೂರು: ಹುಬ್ಬಳ್ಳಿಯ ದೇಶದ್ರೋಹಿ ಕೃತ್ಯದ ಆರೋಪಿಗಳ ಕೇಸು ಹಿಂಪಡೆದ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಶೀಘ್ರವೇ ಹಮ್ಮಿಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಕಟಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂದು ವಿಧಾನಪರಿಷತ್ ಉಪ ಚುನಾವಣೆ ಸಂಬಂಧ ನಡೆದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಹುಬ್ಬಳ್ಳಿಯಲ್ಲಿ 2022ರಲ್ಲಿ ದೇಶದ್ರೋಹಿಗಳು ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ, ದಾಳಿ ಮಾಡಿ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಆ ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸುಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಿಂದಕ್ಕೆ ಪಡೆದಿದೆ. ಇದು ಅತ್ಯಂತ ದುರದೃಷ್ಟಕರ ಮತ್ತು ಖಂಡನಾರ್ಹ ಎಂದು ಆಕ್ಷೇಪಿಸಿದರು.

ಗೃಹ ಸಚಿವರ ನೇತೃತ್ವದ ಉಪ ಸಮಿತಿ ಇದನ್ನು ಶಿಫಾರಸು ಮಾಡಿತ್ತು. ನಿಮ್ಮದೇ ಪೊಲೀಸರು ಈ ಕುರಿತು ಎಫ್‍ಐಆರ್ ಮಾಡಿತ್ತು. ಎನ್‍ಐಎ ತನಿಖೆಯೂ ನಡೆಯುತ್ತಿದೆ. ಆದರೆ, ರಾಜ್ಯ ಸರಕಾರದ ಈ ನಡವಳಿಕೆ ಅಕ್ಷಮ್ಯ ಅಪರಾಧ. ನಿನ್ನೆ ಇದರ ವಿರುದ್ಧ ಬೆಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ ಎಂದು ವಿವರಿಸಿದರು.

ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳು ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಲು ಬಿಜೆಪಿ ನಿರಂತರ ಹೋರಾಟ ನಡೆಸುತ್ತ ಬಂದಿದೆ ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರು ಮುಡಾ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಣವನ್ನು ವರ್ಗಾವಣೆ ಮಾಡಿದ ವಿಚಾರಗಳನ್ನು ಇಟ್ಟುಕೊಂಡು ಮುಂದಿನ ಹೋರಾಟದ ರೂಪುರೇಷೆಗಳನ್ನು ನಾವು ಸದ್ಯವೇ ತೀರ್ಮಾನ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಹರಿಯಾಣ ಮತ್ತು ಜಮ್ಮು- ಕಾಶ್ಮೀರದ ಚುನಾವಣೆ ಫಲಿತಾಂಶವನ್ನು ಪ್ರಸ್ತಾಪಿಸಿದ ಅವರು, ಹರಿಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ಪ್ರಬುದ್ಧ ಮತದಾರರು ಅಲ್ಲಿನ ರಾಜ್ಯ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ. ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು. ಹರಿಯಾಣದಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಸೋಲನ್ನು ಅನುಭವಿಸಿದೆ ಎಂದು ವಿಶ್ಲೇಷಿಸಿದರು.

ಜಮ್ಮು- ಕಾಶ್ಮೀರದ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಅಧಿಕೃತ ವಿಪಕ್ಷವಾಗಿ ಹೊರಹೊಮ್ಮಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕೀಯ ನೀತಿಯನ್ನು ಕಾಂಗ್ರೆಸ್ ಪಕ್ಷ ಅನುಸರಿಸಿಕೊಂಡು ಬಂದಿತ್ತು. 

ಸಂದದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಕ್ಷೇತ್ರಕ್ಕೆ ವಿಧಾನಪರಿಷತ್ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿ ಒಬ್ಬ ಯುವ ಕಾರ್ಯಕರ್ತ, ಹಿಂದುತ್ವದ ಕಟ್ಟಾಳು ಕಿಶೋರ್‍ಕುಮಾರ್ ಪುತ್ತೂರು ಅವರನ್ನು ಅಭ್ಯರ್ಥಿಯಾಗಿ ಪ್ರಕಟಿಸಿದೆ. ನಮ್ಮೆಲ್ಲ ಶಾಸಕರು, ಜನಪ್ರತಿನಿಧಿಗಳು ಉತ್ಸಾಹದಿಂದ ಇವತ್ತು ಕೆಲಸ ಮಾಡುತ್ತಿದ್ದು, ನಮ್ಮ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲ್ಲಿಸಲು ಶ್ರಮಿಸುತ್ತಿದ್ದಾರೆ ಎಂದರು. ಈ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಕೊಟ್ಟಿದ್ದನ್ನು ನಾವು ಕೊಟ್ಟಿದ್ದು ಅನ್ನೋದು, ದುಡ್ಡಿದ್ರೆ ಕೇಂದ್ರದ ತೆರಿಗೆ ಹಣ ಯಾಕೆ: ಸಿದ್ದರಾಮಯ್ಯಗೆ ಪ್ರಶ್ನೆ