ಬೆಂಗಳೂರು: ಶಿಕ್ಷಣ ಸಚಿವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಅವರ ಹೇರ್ ಕಟಿಂಗ್‍ಗೆ ಹಣ ಸಂಗ್ರಹಿಸಿ ಕೊಡಲು ಯುವ ಮೋರ್ಚಾದವರಿಗೆ ಹೇಳುವೆ ಎಂದು ವಿಜಯೇಂದ್ರ ಕಾಲೆಳೆದಿದ್ದಾರೆ.
ಇತ್ತೀಚೆಗೆ ವಿಜಯೇಂದ್ರ ಶಿಕ್ಷಣ ಸಚಿವ ಮಧುಬಂಗಾರಪ್ಪ ಉದ್ದ ಕೂದಲು ಬೆಳೆಸಿಕೊಂಡು ಇನ್ನೂ ಸಿನಿಮಾದಲ್ಲಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮಧು ಬಂಗಾರಪ್ಪ, ವಿಜಯೇಂದ್ರ ಅವರನ್ನೇ ಹೇರ್ ಕಟ್ ಮಾಡಿಸಲು ಕರೆಸುವುದಾಗಿ ಹೇಳಿದ್ದರು. ಅದಕ್ಕೀಗ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಒಬ್ಬರು ಶಿಕ್ಷಣ ಸಚಿವರು ಹೇಗಿರಬೇಕು? ಅವರು ಮಾದರಿ ಆಗಿರಬೇಕು. ನಮ್ಮ ಶಿಕ್ಷಣ ಸಚಿವರು ಒಂದು ಕಡೆ ನನಗೆ ಕನ್ನಡ ಬರುವುದಿಲ್ಲ ಎನ್ನುತ್ತಾರೆ. ಮತ್ತೊಂದು ಕಡೆ ಯಾವ ರೀತಿ ಅವಾಂತರ ಮಾಡಿದ್ದಾರೆಂಬುದು ನಿಮಗೂ ಗೊತ್ತಿದೆ. ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಕರ ನೇಮಕಕ್ಕೆ ಖಾಸಗಿ ಕಾರ್ಮಿಕರನ್ನು ಗುತ್ತಿಗೆ ಮಾಡಿಕೊಳ್ಳುವವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಶಿಕ್ಷಣ ಸಚಿವರು ಎಷ್ಟು ಗಂಭೀರವಾಗಿ ಇಲಾಖೆಯನ್ನು ಪರಿಗಣಿಸಿದ್ದಾರೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು. ಶಿಕ್ಷಕರು- ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಪೋಷಕರೂ ಚಿಂತೆಗೀಡಾಗಿದ್ದಾರೆ. ಇಂಥ ಶಿಕ್ಷಣ ಸಚಿವರು ಬೇಕೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದರು.
ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದರು. ಈ ಸರಕಾರ ಬಂದ ಬಳಿಕ ಕಳೆದ ಅಕ್ಟೋಬರ್‍ನಿಂದ 800 ಕೋಟಿಗೂ ಹೆಚ್ಚು ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ ಎಂದು ಟೀಕಿಸಿದರು.
ಎಸ್‍ಟಿ ಅಭಿವೃದ್ಧಿ ನಿಗಮದ 187 ಕೋಟಿಗೂ ಹೆಚ್ಚು ಮೊತ್ತದ ಹಗರಣ ನಿನ್ನೆ ನಡೆದಿದೆ. ಇಲಾಖೆ ಅಕೌಂಟೆಂಟ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಿಎಂ, ಡಿಸಿಎಂ ಕಳಕಳಿ, ಪ್ರಾಮಾಣಿಕತೆ ಎಲ್ಲಿ ಹೋಗಿದೆ? ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಿತಾಮಹರೆಂದು ರುಜುವಾತಾಗಿದೆ ಎಂದು ನುಡಿದರು.
ಇಲಾಖೆ ಸಚಿವರ ಮೌಖಿಕ ಆದೇಶದ ಮೇರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟಿನಲ್ಲಿ ತಿಳಿಸಿದ್ದು, ತಕ್ಷಣ ಆ ಸಚಿವರನ್ನು ತಮ್ಮ ಮಂತ್ರಿಮಂಡಲದಿಂದ ಕೈಬಿಡಬೇಕು; ಹೈಕೋರ್ಟ್ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ಮಾಡಿ ಎಂದು ಆಗ್ರಹಿಸಿದರು.