ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿ ಕುರಿತು ಕುಮಾರಸ್ವಾಮಿಯವರ ಜೊತೆ ಚರ್ಚೆಗೆ ಸಮಯ, ಸ್ಥಳ ನಿಗದಿ ಆಗಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಇವತ್ತು ಅಥವಾ ನಾಳೆ ಕುಳಿತು ಚರ್ಚಿಸುತ್ತೇವೆ ಎಂದರು. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆ ಕ್ಷೇತ್ರಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಬಳಿಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಈಗ ಸಂಸದ, ಕೇಂದ್ರದ ಸಚಿವರಾಗಿದ್ದಾರೆ. ಆ ಕ್ಷೇತ್ರದ ಕುರಿತು ಎಚ್‍ಡಿಕೆಯವರು ನಮ್ಮ ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ಯೋಗೇಶ್ವರ್‍ಗೆ ಅನ್ಯಾಯ ಆಗಬಾರದೆಂಬ ಆಸೆ ನನಗೂ ಇದೆ. ಇಲ್ಲಿಯೂ ಚರ್ಚೆ ಮಾಡುತ್ತೇವೆ. ಕೇಂದ್ರದ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಒಂದೆಡೆ ಯೋಗೇಶ್ವರ್, ಇನ್ನೊಂದೆಡೆ ಕುಮಾರಸ್ವಾಮಿ ತಮ್ಮ ಪಕ್ಷದವರಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದು ಕೂತಿದ್ದಾರೆ.
ಇನ್ನು, ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಇ.ಡಿ. ಅಖಾಡಕ್ಕೆ ಇಳಿದಿದೆ. ಮೈಸೂರು ಮುಡಾ ಮೇಲೆ ದಾಳಿಯನ್ನೂ ನಡೆಸಿದೆ. ಇವತ್ತು ಕೂಡ ದಾಳಿ ಮುಂದುವರೆದಿದೆ. ಆದರೆ, ಮುಖ್ಯಮಂತ್ರಿಗಳು ತಾನು ನಿರಪರಾಧಿ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಇ.ಡಿ. ಕೇಂದ್ರ ಸರಕಾರದ ಕೈಗೊಂಬೆ ಎನ್ನುವ ರೀತಿಯಲ್ಲಿ ಟೀಕಿಸುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿ ಮುಖ್ಯಮಂತ್ರಿಗಳು ಇದ್ದಂತಿದೆ ಎಂದರು.