Daily Horoscope

Select Your Language

Notifications

webdunia
webdunia
webdunia
webdunia

ಎಸ್ಐಆರ್, ವಿಬಿ ಜಿ ರಾಮ್ ಜಿ ಕುರಿತು ಬಿಜೆಪಿಯಿಂದ ಜಾಗೃತಿ: ಬಿ.ವೈ.ವಿಜಯೇಂದ್ರ

BY Vijayendra
ಬೆಂಗಳೂರು: ಬಿಜೆಪಿ ಎಸ್‍ಐಆರ್ ಕಡೆ ಹೆಚ್ಚಿನ ಗಮನ ಕೊಡಲಿದೆ; ಅಲ್ಲದೇ ಮುಂದಿನ ದಿನಗಳಲ್ಲಿ ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಮೂಡಿಸಲು ಮುಂದಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 5ನೇ ತಾರೀಕಿನಿಂದ ಬೆಂಗಳೂರಿನಲ್ಲಿ ನಮ್ಮೆಲ್ಲ ವಿವಿಧ ಜಿಲ್ಲೆಗಳ ಸಭೆಗಳನ್ನು ಮಾಡುತ್ತಿದ್ದೇವೆ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ ಸರಣಿ ಸಭೆ ನಡೆಸಲಾಗಿದೆ. ಇವತ್ತಿಗೆ ಬಹುತೇಕ 35 ಜಿಲ್ಲೆಗಳ ಸಭೆ ಪೂರ್ಣಗೊಳ್ಳುತ್ತಿದೆ ಎಂದು ವಿವರಿಸಿದರು.

ಸಂಘಟನಾತ್ಮಕ ಸಭೆಯಲ್ಲಿ ಜಿಲ್ಲಾ ರಾಜಕೀಯ ಸ್ಥಿತಿಗತಿಗಳು, ನಮ್ಮ ಸಂಘಟನೆಯ ಪರಿಸ್ಥಿತಿ ಏನಿದೆ? ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವ ರೀತಿ ಪಕ್ಷವನ್ನು ಸದೃಢವಾಗಿ ಮುಂದಕ್ಕೆ ಒಯ್ಯುವ ಕುರಿತು ಚರ್ಚಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಕುರಿತ ಕೇಂದ್ರ ಚುನಾವಣಾ ಆಯೋಗದ ನಿರ್ಣಯವನ್ನು ಪಕ್ಷ ಸ್ವಾಗತಿಸಿದೆ. ರಾಜ್ಯದಲ್ಲಿ ಫೆಬ್ರವರಿ ಅಥವಾ ನಂತರದ ದಿನಗಳಲ್ಲಿ ಎಸ್‍ಐಆರ್ ನಡೆಯುವಾಗ ಬಿಜೆಪಿ ಇದರತ್ತ ಹೆಚ್ಚಿನ ಗಮನ ಕೊಡಲಿದೆ ಎಂದು ತಿಳಿಸಿದರು.

 ಬಿಹಾರ ರಾಜ್ಯದ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಿದೆ. ಪಟ್ಟಿಯಲ್ಲಿ ಸೇರಿದ್ದ 65 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರನ್ನು ಅಲ್ಲಿನ ಚುನಾವಣಾ ಆಯೋಗ ಕೈಬಿಟ್ಟಿರುವುದು, ಉತ್ತರ ಪ್ರದೇಶದಲ್ಲಿ 2.5 ಕೋಟಿಗೂ ಹೆಚ್ಚು ನಕಲಿ ಮತದಾರರನ್ನು ಕೈಬಿಡಲಾಗಿದೆ ಎಂದು ಗಮನ ಸೆಳೆದರು.

ವಿಬಿ ಜಿ ರಾಮ್ ಜಿ ಕುರಿತು ಕಾಂಗ್ರೆಸ್ಸಿನವರು ಅಪಪ್ರಚಾರ ನಿರತರಾಗಿದ್ದಾರೆ. ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರ ಹತಾಶ ಸ್ಥಿತಿಯಲ್ಲಿದೆ. ಗ್ಯಾರಂಟಿಯ ಭ್ರಮೆಯಲ್ಲಿದ್ದ ರಾಜ್ಯ ಸರಕಾರಕ್ಕೆ ಸತ್ಯದ ಅರಿವಾಗುತ್ತಿದೆ. ರಾಜ್ಯದಲ್ಲಿ ವಾತಾವರಣ ದಿನೇದಿನೇ ಈ ಸರಕಾರದ ವಿರುದ್ಧ ತಿರುಗುತ್ತಿದೆ. ಇದರ ಅರಿವಾದ ಬಳಿಕ ಕಾಂಗ್ರೆಸ್ ಪಕ್ಷವು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡಿ, ಮನ್ ರೇಗಾದಲ್ಲಿ ಗಾಂಧೀಜಿ ಅವರನ್ನು ಕೇಂದ್ರದ ಎನ್‍ಡಿಎ ಸರಕಾರ ಎರಡನೇ ಬಾರಿಗೆ ಕಗ್ಗೊಲೆ ಮಾಡಿದೆ ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಅಪಪ್ರಚಾರ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಇದರ ವಿರುದ್ಧ ಜಿಲ್ಲಾ ಕೇಂದ್ರಗಳು- ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯವನ್ನು ಯಶಸ್ವಿಯಾಗಿ ಮಾಡಲು ಜಿಲ್ಲಾ ಸಭೆಗಳಲ್ಲಿ ತಿಳಿಸಿದ್ದೇವೆ ಎಂದು ವಿವರಿಸಿದರು.

ಜಿಲ್ಲಾ ಪ್ರವಾಸದ ಬದಲಾಗಿ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅಪೇಕ್ಷೆ ಪಟ್ಟಿದ್ದರು. ನಮ್ಮ ನಿರೀಕ್ಷೆಗೂ ಮೀರಿ ಎಲ್ಲ ಜಿಲ್ಲೆಗಳ ಸಭೆಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು. ಪಕ್ಷದ ಎಲ್ಲ ಹಿರಿಯರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖಂಡರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ- ಹೀಗೆ ಎಲ್ಲ ಹಿರಿಯರೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಸಂತಸದ ವಿಚಾರ; ಇದರಿಂದ ಕಾರ್ಯಕರ್ತರು, ಮುಖಂಡರಿಗೆ ಆನೆ ಬಲ ಬಂದಂತಾಗಿದೆ ಎಂದರು.

ಈಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಜನರ ವಿಶ್ವಾಸ, ಜನಪ್ರಿಯತೆ ಕಳಕೊಂಡಿರುವ ಮತ್ತು ಚುನಾವಣಾ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾದ ಕಾಂಗ್ರೆಸ್ ಸರಕಾರದ ವಿರುದ್ಧ ವಿವಿಧ ಹಂತದಲ್ಲಿ ಜನಾಂದೋಲನ- ಹೋರಾಟ ರೂಪಿಸಲು ಚರ್ಚೆ ನಡೆದಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಳ್ಳಾರಿಯಲ್ಲಿ ನಡೆದ ಗೂಂಡಾಗಿರಿಯೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಸರಕಾರಿ ಆಡಳಿತಯಂತ್ರದ ದುರುಪಯೋಗ ಮೂಲಕ ಕಾಂಗ್ರೆಸ್ ಶಾಸಕ ಮುಂದಾಳತ್ವ ವಹಿಸಿ ಗೂಂಡಾಗರ್ದಿ ಮಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಅವರದೇ ಗನ್‍ಮ್ಯಾನ್ ಗುಂಡು ಹಾರಿಸಿ, ಅವರ ಕಾರ್ಯಕರ್ತನೇ ಮೃತಪಟ್ಟಿದ್ದಾರೆ. ಕುಟುಂಬದ ಸದಸ್ಯರು ರಾಜಶೇಖರ್ ಅವರ ಶವವನ್ನು ದಫನ ಮಾಡಲು ಮುಂದಾಗಿದ್ದರು. ಪೊಲೀಸರು ಬಲವಂತವಾಗಿ ಶವವನ್ನು ಸುಡುವ ಕೆಲಸ ಮಾಡಿದ್ದಾಗಿ ಮಾಹಿತಿ ಬರುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು. ಎರಡು ಬಾರಿ ಪೋಸ್ಟ್ ಮಾರ್ಟೆಮ್ ಆದ ಮಾಹಿತಿ ಇದೆ ಎಂದರು.

ಯಲ್ಲಾಪುರದಲ್ಲಿ ದಲಿತ ಹೆಣ್ಮಗಳ ಬರ್ಬರ ಹತ್ಯೆ ನಡೆದಿದೆ. ಕಾಂಗ್ರೆಸ್ ಸರಕಾರ ಇದನ್ನು ಖಂಡಿಸಿಲ್ಲ. ಸಚಿವರು ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ನಾನು ಪಕ್ಷದ ಮುಖಂಡರ ಜೊತೆ ಯಲ್ಲಾಪುರಕ್ಕೆ ಭೇಟಿ ಕೊಟ್ಟಿದ್ದೇನೆ. ಬಡ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಮಾತನಾಡಿಸಿ ಬಂದಿದ್ದೇನೆ. ಬಳ್ಳಾರಿಯಲ್ಲಿ ನಿಮ್ಮ ಪುಡಾರಿಗಳಿಂದ ಸತ್ತ ನಿಮ್ಮ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ನೀಡಿದ್ದೀರಿ; ದಲಿತ ಬಡ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡಿ ಎಂದು ನಾವು ಆಗ್ರಹ ಪಡಿಸಿದ್ದೇವೆ. ಇಲಾಖೆಯ ನೆರವಿನ ಕುರಿತು ಮಾತನಾಡಿದೆಯೇ ಹೊರತು 50 ಲಕ್ಷ ಪರಿಹಾರ ಕೊಡದೇ ಇರುವಷ್ಟು ದಾರಿದ್ರ್ಯ ಈ ಸರಕಾರಕ್ಕೆ ಬಂದಿದೆಯೇ ಎಂದು ಆ ಜಿಲ್ಲೆಯ ಜನರು ಪ್ರಶ್ನಿಸುತ್ತಿದ್ದಾರೆ ಎಂದರು. ದಲಿತ ಕುಟುಂಬಕ್ಕೆ ನ್ಯಾಯ ಕೊಡಿ, 50 ಲಕ್ಷ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

 
ದಲಿತ ಶಾಸಕಿ ಬಗ್ಗೆ ಶ್ರದ್ಧಾಂಜಲಿ ಟ್ವೀಟ್ ಮಾಡಿದರೂ ಕ್ರಮ ಇಲ್ಲ
ಸುಳ್ಯ ಕ್ಷೇತ್ರದ ಬಿಜೆಪಿಯ ದಲಿತ ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಬಂಟ್ವಾಳದ ಕಾಂಗ್ರೆಸ್ ಕಾರ್ಯಕರ್ತ ಸಂದೇಶ್, ಶ್ರದ್ಧಾಂಜಲಿ ಟ್ವೀಟ್ ಮಾಡಿದ್ದಾನೆ. ನಮ್ಮ ಕಾರ್ಯಕರ್ತರು ದೂರು ನೀಡಿದ್ದು, ಯಾವುದೋ ಒಂದು ತಾಂತ್ರಿಕ ಕಾರಣ ಮುಂದಿಟ್ಟು ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕಿಗೆ ಅಪಮಾನ ಆಗಿದ್ದರೂ ಆ ಕಾರ್ಯಕರ್ತನನ್ನು ಬಂಧಿಸಿಲ್ಲ; ಅಹಿಂದ ಸಮುದಾಯದ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರೇ, ಕರ್ನಾಟಕದಲ್ಲಿ ಇವತ್ತು ಈ ರೀತಿ ದಲಿತರಿಗೆ ಅಪಮಾನ ಆಗುವುದನ್ನು ಸಹಿಸಿಕೊಂಡು ಸುಮ್ಮನೇ ಕೂತದ್ದು ಸರಿಯೇ ಎಂದು ಕೇಳಿದರು. ಯಾವುದೇ ಪಕ್ಷದ ಕಾರ್ಯಕರ್ತ ಇರಬಹುದು; ದಲಿತ ಮಹಿಳೆಗೆ ಅಪಮಾನ ಆದಾಗ ಅದರ ವಿರುದ್ಧ ಪೊಲೀಸರು ಯಾಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ಕೇಳಿದರು.

ಗೃಹ ಸಚಿವರು ಕಾನೂನು- ಸುವ್ಯವಸ್ಥೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಗೃಹ ಸಚಿವರಿಗೆ ಮಾಹಿತಿಯೇ ಇರುವುದಿಲ್ಲ; ಬಳ್ಳಾರಿಗೆ ಹೋದ ಉಪ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿ ಬಂದಿದ್ದಾರೆ. ಕುಮಾರಸ್ವಾಮಿಯವರೂ ಇದನ್ನು ಪ್ರಶ್ನೆ ಮಾಡಿದ್ದರು. ಈ ಎಲ್ಲ ವಿಚಾರಗಳನ್ನು ತೆಗೆದುಕೊಂಡು ಜನವರಿ 17ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡುತ್ತಿದ್ದೇವೆ. ಈ ಹೋರಾಟದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯ ಮುಖಂಡರು ಭಾಗವಹಿಸುತ್ತಾರೆ ಎಂದು ಪ್ರಕಟಿಸಿದರು.

ನಂತರ ವಿವಿಧ ಹಂತದ ಹೋರಾಟ ಕೈಗೆತ್ತಿಕೊಳ್ಳಲು ನಿಶ್ಚಯಿಸಿದ್ದೇವೆ. ರೈತರಿಗೆ ಕಾಂಗ್ರೆಸ್ ಸರಕಾರದ ದೋಖಾ ಮಾಡುತ್ತಿರುವುದನ್ನು ಖಂಡಿಸಿ ಬಾಗಲಕೋಟೆಯಲ್ಲಿ ಹೋರಾಟ ನಡೆಸಲಿದ್ದೇವೆ. ಮುಂದಿನ ದಿನದಲ್ಲಿ ದಿನಾಂಕ ನಿಗದಿ ಮಾಡುತ್ತೇವೆ ಎಂದರು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸಚಿವರು ಸದನಕ್ಕೆ ಗೃಹಲಕ್ಷ್ಮಿ ಯೋಜನೆ ಸಂಬಂಧ ತಪ್ಪು ಮಾಹಿತಿ ಕೊಟ್ಟ್ಟಿದ್ದರು. ಇವತ್ತಿಗೂ ಮುಖ್ಯಮಂತ್ರಿಗಳು, ಸಚಿವರು 5 ಸಾವಿರ ಕೋಟಿ ವಿಚಾರದಲ್ಲಿ ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು. ಹಣ ಎಲ್ಲಿ ಹೋಗಿದೆ? ದುರ್ಬಳಕೆ ಆಗಿದೆಯೇ ಎಂದು ಕೇಳಿದರು. ಗೃಹಲಕ್ಷ್ಮಿ ಮತ್ತು ಸರಕಾರದ ವೈಫಲ್ಯಗಳನ್ನು ಹುಬ್ಬಳ್ಳಿಯಲ್ಲಿ ಬೃಹತ್ ಹೋರಾಟವನ್ನು ಮುಂದಿನ ದಿನದಲ್ಲಿ ಆಯೋಜಿಸುತ್ತೇವೆ ಎಂದು ಪ್ರಕಟಿಸಿದರು.

ಡ್ರಗ್ಸ್ ಹಾವಳಿ ತೀವ್ರವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಮಾದಕವಸ್ತು ವಶ ಪ್ರಮಾಣ ತೀವ್ರ ಏರಿಕೆ ಕಂಡಿದೆ. ಇದು ಕಳವಳಕಾರಿ ಬೆಳವಣಿಗೆ ಎಂದರು. ಇದು ಯುವಜನರನ್ನು ತಲುಪುತ್ತಿರುವುದು ಗಂಭೀರ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೊಂದೆಡೆ ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಕುಡುಕರ ರಾಜ್ಯವಾಗಿ ಮಾಡಲು ಹೊರಟಿದೆ ಎಂದು ಟೀಕಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ರೂ. ಕೊಡುವುದಾಗಿ ಹೇಳುತ್ತಾರೆ. ಬಡವರ ಮನೆಯನ್ನು ಹಾಳು ಮಾಡುವ ಕೆಲಸ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ಆಗುತ್ತಿದೆ. ಕಳೆದ ಎರಡೂವರೆ ವರ್ಷದಲ್ಲಿ ಅಬಕಾರಿ ಗುರಿಯನ್ನು ಶೇ 35 ಹೆಚ್ಚಿಸಿದ್ದಾರೆ. ಇದೊಂದು ನಾಲಾಯಕ್ ಗ್ಯಾರಂಟಿ ಸರಕಾರ. ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಜನರಿಗೆ ಹೆಂಡ ಕುಡಿಸಿ ಬೊಕ್ಕಸಕ್ಕೆ ಆದಾಯ ತರಲು ಮುಂದಾಗಿದ್ದಾರೆ ಎಂದು ದೂರಿದರು. ದಿನಸಿ ಅಂಗಡಿಗಳಲ್ಲೂ ಹೆಂಡದ ಬಾಟಲ್ ಮಾರಾಟ ಮಾಡುವ ದುಸ್ಥಿತಿ ಬಂದಿದೆ ಎಂದರು.

ಇಸ್ಪೀಟ್, ಮಟ್ಕಾ ದಂಧೆಗೆ ಕಡಿವಾಣವೇ ಇಲ್ಲ; ಭ್ರಷ್ಟಾಚಾರ, ಲಂಚಾವತಾರ ಈ ಕಾಂಗ್ರೆಸ್ ಸರಕಾರದಲ್ಲಿ ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ, ಒಬ್ಬ ಪೊಲೀಸ್ ಅಧಿಕಾರಿ ಆ ಸ್ಥಾನಕ್ಕೆ ಬರಲು ಕೋಟ್ಯಂತರ ರೂ. ಲಂಚ ಕೊಡಬೇಕಿದೆ. ಇಸ್ಪೀಟ್, ಮಟ್ಕಾ ದಂಧೆಗೆ ಲಂಗುಲಗಾಮಿಲ್ಲ ಎಂದು ಟೀಕಿಸಿದರು. ಇಷ್ಟಾದರೂ ನುಡಿದಂತೆ ನಡೆದ ಸರಕಾರ ಎಂದು ಬೀಗುತ್ತಿದ್ದಾರೆ. ಈ ಸರಕಾರದ ಆಡಳಿತ ವೈಖರಿ, ಯಾವುದೇ ಜನಪರ ಯೋಜನೆ ಕೊಡದೇ ಇರುವುದು, ಅಭಿವೃದ್ಧಿ ಕೆಲಸ ಆಗದೇ ಇರುವುದು, ಭ್ರಷ್ಟಾಚಾರ ಮಿತಿ ಮೀರಿ ಹೋದುದು, ಕಾನೂನು- ಸುವ್ಯವಸ್ಥೆ ಹದಗೆಟ್ಟದ್ದು- ಇವೆಲ್ಲವನ್ನೂ ತೆಗೆದುಕೊಂಡು ವಿವಿಧ ಹಂತಗಳಲ್ಲಿ ಹೋರಾಟ ಮಾಡಲು ಪಕ್ಷದ ಹಿರಿಯರ ನೇತೃತ್ವದಲ್ಲಿ ತೀರ್ಮಾನ ಆಗಿದೆ ಎಂದು ವಿವರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್‌ ಜನ ನಾಯಗನ್ ಸಿನಿಮಾ ಬೆಂಬಲಿಸಿ ಮೋದಿ ವಿರುದ್ಧ ಗುಡುಗಿದ ರಾಹುಲ್ ಗಾಂಧಿ