ವಿಚಿತ್ರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು ಮನೆಯೊಂದರ ಕಾಂಪೌಂಡ್ನಲ್ಲಿಯೇ ಶವ ಸಂಸ್ಕಾರ ಮಾಡಲಾಗಿದೆ. ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ವಿರೋಧ ಹೆಚ್ಚಾಗುತ್ತಿದ್ದಂತೆ ಮೃತರ ಕುಟುಂಬಸ್ಥರು ಸ್ಥಳೀಯರ ಮೇಲೆ ಕಲ್ಲು ತೂರಾಟ ಕೂಡ ನೆಡೆಸಿದ್ದಾರೆ.
ದಕ್ಷಿಣ ಬೆಂಗಳೂರಿನ ಪುಟ್ಟೇನಹಳ್ಳಿಯ ಪಾಂಡುರಂಗ ನಗರದಲ್ಲಿ ಕಳೆದ 3 ದಿನಗಳ ಹಿಂದೆ 80 ವರ್ಷದ ವೃದ್ಧೆ ಮೃತಪಟ್ಟಿದ್ದರು. ಸ್ವಂತ ಮನೆಯ ಜಾಗದಲ್ಲಿಯೇ ಕುಟುಂಬದವರು ಅಂತ್ಯಕ್ರಿಯೆ ಮಾಡಿದ್ದಾರೆ.
ಅಂತ್ಯಸಂಸ್ಕಾರ ಸ್ಥಳದ ಪಕ್ಕದಲ್ಲಿ ಅಪಾರ್ಟ್ ಮೆಂಟ್ ಗಳು ವಾಸದ ಮನೆಗಳು ಇವೆ ಹೀಗಾಗಿ ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಶವಗಳನ್ನು ನೋಡಿ ಮನೆಯಲ್ಲಿನ ಮಕ್ಕಳು ಭಯ ಪಡುತ್ತಾರೆ ಅಂತಹದರಲ್ಲಿ ಜನ ವಾಸಿಸುವ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದರೆ ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದ್ದು. ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿಲ್ಲ. ವಿರೋಧ ಹೆಚ್ಚಾಗುತ್ತಂತೆ ಮೃತಳ ಕುಟುಂಬದವರು ಲೇಔಟ್ ಅಸೋಸಿಯೇಷನ್ ಅಧ್ಯಕ್ಷರ ಮೇಲೆ ಕಲ್ಲು ತೂರಾಟ ನೆಡೆಸಿದ್ದಾರೆ.
ವಿಷಯ ತಿಳಿದ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತರ ಕುಟುಂಬಸ್ಥರು ಮತ್ತು ನೆರೆ ಹೊರೆಯವರಿಗೆ ಮನವೊಲಿಸುವುದರಲ್ಲಿ ನಿರತರಾಗಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ಅಂತ್ಯ ಸಂಸ್ಕಾರ ಮಾಡುವ ಹಾಗಿಲ್ಲ ಎಂಬ ನಿಯಮವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.