ಚಿತ್ರದುರ್ಗ-ಚಿತ್ರದುರ್ಗದಲ್ಲಿ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಇಂಗ್ಲಿಷ್ ಬೋರ್ಡ್ ಗಳನ್ನು ಕಿತ್ತೊಗೆದು ಮತ್ತು ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇಂದು ನಗರದ ಗಾಂಧಿ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆಯನ್ನೂ ಸಹ ಹಮ್ಮಿಕೊಳ್ಳಲಾಗಿತ್ತು.
ವ್ಯಾಪಾರ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಅಳವಡಿಸಿರುವ ಬೋರ್ಡ್‌ಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕೆಂದು ಸರ್ಕಾರ ಆದೇಶಿಸಿದ್ದರೂ ಸೊಪ್ಪು ಹಾಕದವರಿಗೆ ಕನ್ನಡ ರಕ್ಷಣಾ ವೇದಿಕೆ ಹಾಗೂ ಇತರೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಮಂಗಳವಾರ ರಾಜ್ಯದ ಚಿತ್ರದುರ್ಗ, ಕಾರವಾರ, ಕೊಪ್ಪಳ, ದಾವಣಗೆರೆ ಮುಂತಾದೆಡೆ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಕನ್ನಡ ವಿರೋಧಿ ಮನಸ್ಥಿತಿಗೆ ಸೆಡ್ಡುಹೊಡೆಯಲಾಗಿದೆ.
ಕಾರವಾರದಲ್ಲಿ ಕರವೇ ಕಾರ್ಯಕರ್ತರೂ ಸಹ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕನ್ನಡ ನಾಮಫಲಕ ಅಳವಡಿಸಿಕೊಳ್ಳದವರಿಗೆ ಎಚ್ಚರಿಕೆ ನೀಡಲಾಯಿತು. ಕೊಪ್ಪಳದಲ್ಲಿ ಇಂಗ್ಲಿಷ್ ಬೋರ್ಡ್ ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು, ನಿಯಮ ಜಾರಿಗೊಳಿಸದ ಜಿಲ್ಲಾಡಳಿತದ ವಿರುದ್ದವೂ ಕಿಡಿಕಾರಿದರು.
ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದ ಕರವೇ ಕಾರ್ಯಕರ್ತರು ಕನ್ನಡೇತರ ಬೋರ್ಡ್ ಗಳ ವಿರುದ್ದ ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.