ಬೆಂಗಳೂರು: ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯ ಭಂಡತನದ ನಿರ್ಧಾರವನ್ನು ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದರು.
ಜಗನ್ನಾಥ ಭವನದಿಂದ ವಿಧಾನಸೌಧಕ್ಕೆ ತೆರಳುವ ಸೈಕಲ್ ಜಾಥಾದ ಆರಂಭದ ಸಂದರ್ಭದಲ್ಲಿ ಅವರು ಮಾತನಾಡಿದರು. ಜನರಿಗೆ ಹೊರೆ ಆಗುವ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಅಲ್ಲಿನವರೆಗೆ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಅವರು ಎಚ್ಚರಿಸಿದರು.
ಬಿಜೆಪಿ ಸರಕಾರದ ನಿರ್ಧಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮಾಡುತ್ತಿದೆ. ಮುಖ್ಯಮಂತ್ರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವವರೆಗೆ ಈ ಹೋರಾಟದಿಂದ ವಿಮುಖರಾಗುವುದಿಲ್ಲ ಎಂದೂ ಅವರು ತಿಳಿಸಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್,
ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಮೊದಲಾದ ಪ್ರಮುಖರು ಭಾಗವಹಿಸಿದ್ದರು. ಬೆಂಗಳೂರು ಬಿಜೆಪಿಯ 3 ಜಿಲ್ಲೆಗಳೂ ಸೇರಿ ಈ ಜಾಥಾ ಏರ್ಪಡಿಸಿದ್ದವು. ಇಳಿಸಿ ಇಳಿಸಿ ತೈಲಬೆಲೆ ಇಳಿಸಿ, ತೊಲಗಿಸಿ ತೊಲಗಿಸಿ ರಾಜ್ಯ ಸರಕಾರ ತೊಲಗಿಸಿ, ಬೇಕೇ ಬೇಕು ನ್ಯಾಯ ಬೇಕು, ಬೆಲೆ ಏರಿಕೆ ಮಾಡಿದ ರಾಜ್ಯ ಸರಕಾರಕ್ಕೆ ಧಿಕ್ಕಾರ, ಅಯ್ಯಯ್ಯೋ ಅನ್ಯಾಯ ಮೊದಲಾದ ಘೋಷಣೆಗಳನ್ನು ಕೂಗುತ್ತ ಸೈಕಲ್ ಜಾಥಾ ನಡೆಯಿತು.
ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಸೈಕಲ್ ಜಾಥಾ ಪ್ರತಿಭಟನೆ ಸ್ವಲ್ಪ ದೂರ ಸಾಗುತ್ತಿದ್ದಂತೆ ತಡೆದು ನಿಲ್ಲಿಸಿದ ಪೊಲೀಸರು ಸೈಕಲ್ ಜಾಥಾದಲ್ಲಿ ಭಾಗವಹಿಸಿದವರನ್ನು ಬಂಧಿಸಿದರು.