Publish Date: Wed, 29 Jul 2026 (20:56 IST)
Updated Date: Wed, 29 Jul 2026 (20:59 IST)
ದೆಹಲಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರಕಾರ ಡಯಲಾಗ್‍ಗಳ, ನಟನೆಯ ಸರಕಾರ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಟೀಕಿಸಿದ್ದಾರೆ.
ಕರ್ನಾಟಕ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಆಗುವುದರಿಂದ ನಮ್ಮ ರಾಜ್ಯಕ್ಕೆ ಲಾಭ ಆಗುತ್ತದೆಯಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಮರುಪ್ರಶ್ನೆ ಹಾಕಿದರು. ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಬೇಜವಾಬ್ದಾರಿ ಪ್ರದರ್ಶಿಸಿದೆ ಎಂದು ಆಕ್ಷೇಪಿಸಿದರು. ಬೇಜವಾಬ್ದಾರಿ ಕಾರಣಕ್ಕಾಗಿಯೇ ನಾವು 4.56 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಯಿತು ಎಂದು ಆರೋಪಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಬೇಕಿತ್ತು. ನಮ್ಮ ಸರಕಾರ ಬಂದ ನಂತರ ಮೇಕೆದಾಟು ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡುವುದಾಗಿ ಇದೇ ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದರು. ಅದಕ್ಕೆ ವಿರೋಧ ಮಾಡಿದವರನ್ನು ಸನ್ಮಾನ ಮಾಡುವುದು ಯಾಕೆ ಎಂದು ಕೇಳಿದರು. ಈ ಕುರಿತು ನನಗೆ ನೋವಿದೆ ಎಂದರು.
ರಾಜ್ಯದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇಷ್ಟೊಂದು ಬರಗಾಲ ಬಂತಲ್ಲವೇ ಎಂದು ಕಣ್ಣೀರು ಹಾಕುವ ಪರಿಸ್ಥಿತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಳೆ ಮೈಸೂರು ಭಾಗವು ಸಂಪದ್ಭರಿತ ಪ್ರದೇಶ. ಈ ಹಳೆ ಮೈಸೂರು ಭಾಗದಲ್ಲಿ ಕೂಡ ಈಗ ನೀರಿಲ್ಲ. ಕಾವೇರಿ ನದಿ ನೀರು ವಿಚಾರದಲ್ಲಿ ನಮ್ಮ ಸರಕಾರ ಯಾರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಇಟ್ಟಿದ್ದರೋ ಅವರು ಸರಿಯಾಗಿ ವಾದ ಮಾಡಲು ಆಗಿಲ್ಲ. ಇವರು ಸರಿಯಾಗಿ ಆ ಕಡೆ ಗಮನ ಕೊಡುವುದಿಲ್ಲ ಎಂದು ಆಕ್ಷೇಪಿಸಿದರು.
ಇದೀಗ 4.56 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಯಿತು. ಎಷ್ಟು ದುರಂತದ ಪರಿಸ್ಥಿತಿ ಇದು ಎಂದು ತಿಳಿಸಿದರು. ಜೊತೆಗೇ ತಮಿಳುನಾಡಿನ ಮುಖ್ಯಮಂತ್ರಿ ಬರುತ್ತಿದ್ದಾರೆ. ಅವರು ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆ ಸೇರಿ ಆಳ್ವಿಕೆ ನಡೆಸುತ್ತಿದ್ದಾರೆ. ಇವರ ಬೇಜವಾಬ್ದಾರಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಆ ಮುಖ್ಯಮಂತ್ರಿಗೆ ನಮ್ಮ ಮುಖ್ಯಮಂತ್ರಿ ಸ್ವಾಗತ ಕೋರುತ್ತಿದ್ದಾರೆ. ನಮ್ಮ ಮೇಕೆದಾಟು ಯೋಜನೆಯನ್ನು ವಿರೋಧಿಸಿದ ಸರಕಾರ ತಮಿಳುನಾಡಿನದು. ತಮಿಳುನಾಡಿನ ಮುಖ್ಯಮಂತ್ರಿ ಬರುತ್ತಾರಂತೆ; ಅವರು ವಿಧಾನಸೌಧಕ್ಕೆ ಬಂದು ಅಲ್ಲಿ ಚರ್ಚಿಸುತ್ತಾರಂತೆ; ಅವರಿಗೆ ಸನ್ಮಾನ ಮಾಡುತ್ತಾರಂತೆ ಎಂದರಲ್ಲದೇ, ನಮ್ಮ ಯೋಜನೆಯನ್ನು ವಿರೋಧಿಸಿದ ತಮಿಳುನಾಡಿನ ಸಿಎಂಗೆ ಸನ್ಮಾನ, ಗೌರವ ಕೊಡುವುದು ಬೇಕಿತ್ತೇ ಎಂದು ಪ್ರಶ್ನಿಸಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ