ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಕರ್ನಾಟಕದ 16 ಸ್ಥಳಗಳಲ್ಲಿ ದಾಳಿ ನಡೆಸಿ ತಲಾಶ್ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈನಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೊಂದಿದ್ದರು. ಆರೋಪಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಎನ್ನಲಾಗಿದೆ. ಬೆಂಗಳೂರು, ಕೊಡಗು, ಚೆನ್ನೈ, ಎರ್ನಾಕುಲಂ ಸೇರಿದಂತೆ 16 ಕಡೆ ದಾಳಿ ದಾಳಿ ನಡೆಸಲಾಗಿದೆ.
ಆ.4 ರಂದು ತನಿಖೆಯನ್ನು ಕೈಗೆತ್ತಿಕೊಂಡ ಎನ್ಐಎ ಈವರೆಗೆ 19 ಜನರನ್ನು ಬಂಧಿಸಿದೆ. 21 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಪರಾರಿಯಾಗಿರುವ ಇತರರನ್ನು ಪತ್ತೆಹಚ್ಚಲು ಸಂಸ್ಥೆ ತನ್ನ ಶೋಧವನ್ನು ಮುಂದುವರೆಸಿದೆ.
ಕೊಡಗು ಜಿಲ್ಲೆಯ ನಿವಾಸಿಯಾದ ತುಫೈಲ್, ಪಿಎಫ್‌ಐ ಸೇವಾ ತಂಡಗಳ ಉಸ್ತುವಾರಿ ಮತ್ತು ನಿಷೇಧಿತ ಸಂಘಟನೆಯ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ಸುಧಾರಿತ ತರಬೇತಿಯನ್ನು ನಿಯಮಿತವಾಗಿ ನೀಡುವ ಪಿಎಫ್‌ಐ ಮಾಸ್ಟರ್ ಟ್ರೈನರ್ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.
ಈತ ಕರ್ನಾಟಕದ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನೆಟ್ಟಾರುವಿನ ಮೂವರು ದಾಳಿಕೋರರಿಗೆ ಆಶ್ರಯ ನೀಡಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿದೆ.<>