2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ 15 ರಿಂದ 18 ಕ್ಷೇತ್ರಗಳ ಬಗ್ಗೆ ಮಾತ್ರ ಬಿಜೆಪಿ ಹೆಚ್ಚಿನ ಗಮನ ಹರಿಸಲಿದೆ. ಜೆಡಿಎಸ್ ಗೆದ್ದೇ ಗೆಲ್ಲಬಹುದಾದ 5-6 ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟು ಮೈತ್ರಿ ಅಥವಾ ಒಳ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಪಕ್ಷದೊಳಗೆ ಚರ್ಚೆ ನಡೆದಿದೆ. ಇದರಿಂದ ಎರಡೂ ಪಕ್ಷಗಳಿಗೂ ಲಾಭ ಆಗುತ್ತದೆ ಎಂದು ಮೂಲಗಳು ಹೇಳಿವೆ. 2019ರಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಅಷ್ಟು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿರುವುದರಿಂದ ಅದರ ಪರಿಣಾಮ ಲೋಕಸಭಾ ಚುನಾವಣೆ ಮೇಲೂ ಆಗಬಹುದು ಎಂಬ ವಾದವೂ ಕೇಳಿ ಬಂದಿದೆ. 28ರಲ್ಲಿ ಬಿಜೆಪಿ 20 ರಿಂದ 22 ಸ್ಥಾನಗಳನ್ನು ಗೆದ್ದು, ಜೆಡಿಎಸ್‌ಗೆ 8 ಸ್ಥಾನಗಳನ್ನು ಬಿಟ್ಟುಕೊಡಬಹುದು. ಹೀಗಾಗಿ ಜೆಡಿಎಸ್ ಒಪ್ಪಿದರೆ ಮೈತ್ರಿ ಲೇಸು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆದಿದೆ.