Publish Date: Mon, 01 Jul 2024 (21:31 IST)
Updated Date: Mon, 01 Jul 2024 (21:36 IST)
ಬೆಂಗಳೂರು: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದ ಹಾಗೇ 'ಬಿಜೆಪಿಯವರು ಹಿಂದೂ ಸಮಾಜವನ್ನು ಗುತ್ತಿಗೆ ಪಡೆದಿಲ್ಲ' ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಲೋಕಸಭೆಯಲ್ಲಿಅಬ್ಬರದ ಭಾಷಣ ಮಾಡಿದ ರಾಹುಲ್ ಗಾಂಧಿ ಅವರು ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಹಿಂದುತ್ವ ಎಂದರೆ ಭಯ, ದ್ವೇಷ ಹಾಗೂ ಸುಳ್ಳುಗಳನ್ನು ಹರಡುವುದು ಅಲ್ಲ. ಇಂದು ಹಿಂದುತ್ವ ಎಂದು ಹೇಳಿಕೊಂಡು ತಿರುಗಾಡುತ್ತಿರುವವರೇ ಹಿಂಸಾಚಾರವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ರಾಹುಲ್ ಅವರ ಈ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಮುಖಂಡರು ಹಿಂದೂ ಸಮಾಜವನ್ನು ಅವಮಾನಿಸಿದ ರಾಹುಲ್ ಗಾಂಧಿ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದಾರೆ. ಸದ್ಯ ಬಿಜೆಪಿ ಮುಖಂಡರು ರಾಹುಲ್ ಗಾಂಧಿ ಅವರ ನಡೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದರ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ನರೇಂದ್ರ ಮೋದಿ ಇಡೀ ಹಿಂದೂ ಸಮಾಜವಲ್ಲ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ, ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ, ಬಿಜೆಪಿಗೆ ಹಿಂದೂ ಸಮಾಜದ ಗುತ್ತಿಗೆ ಇಲ್ಲ ಎಂದು ತಿರುಗೇಟು ನೀಡಿದೆ.