ಚಿತ್ರದುರ್ಗ : ಬಿಜೆಪಿ ಸರ್ಕಾರ ಸ್ವಪಕ್ಷ ಶಾಸಕರನ್ನು ಕಡೆಗಣನೆ ಮಾಡುತ್ತಿದೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವ ಕುರಿತು ತಾರತಮ್ಯವಾಗಿತ್ತು. ಇದೀಗ ನಮ್ಮ ಪಕ್ಷದ ಸರ್ಕಾರದಲ್ಲೂ ಈ ತಾರತಮ್ಯ ಮುಂದುವರೆದಿದೆ. ಪಿಎಸ್ ಐ ವರ್ಗಾವಣೆ ವಿಚಾರದಲ್ಲಿ ಶಾಸಕರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದಾರೆ. ತಮ್ಮ ಕ್ಷೇತ್ರದ ವರ್ಗಾವಣೆ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರು ಮೂಗು ತೂರಿಸುತ್ತಿದ್ದಾರೆಂದು ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ನನ್ನ ಜೊತೆ ಹೆಚ್ಚು ಒಡನಾಟ ಹೊಂದಿರೋ ಆರ್. ಅಶೋಕ್ ಗೆ ಉನ್ನತವಾದ ಸ್ಥಾನಮಾನ ಸಿಕ್ಕರೆ ನಮ್ಮ ಕ್ಷೇತ್ರವನ್ನು ಗುರುತಿಸುತ್ತಾರೆ. ಆದ್ದರಿಂದ ಇಂದು ನಾನು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತೇನೆ. ನಂತರ ಸಚಿವ ಆರ್.ಅಶೋಕ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.