ಬೆಂಗಳೂರು: ನವಂಬರ್ 2 ರಂದು ಚಿತ್ತಾಪುರದಲ್ಲಿ ಆರ್ ಎಸ್ಎಸ್ ನಡೆಸಲುದ್ದೇಶಿಸಿರುವ ಪಥಸಂಚಲನಕ್ಕೆ ಪ್ರತಿಯಾಗಿ ಭೀಮ್ ಆರ್ಮಿ ಕೂಡಾ ಪಥಸಂಚಲನ ಮಾಡಲು ಹೊರಟಿದೆ. ಆದರೆ ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಈಗ ಟ್ರೋಲ್ ಆಗುತ್ತಿದೆ.
ಆರ್ ಎಸ್ಎಸ್ ಪಥಸಂಚಲನಕ್ಕೆ ಪ್ರತಿಯಾಗಿ ತಾವೂ ಲಾಠಿ ಹಿಡಿದುಕೊಂಡು, ನೀಲಿ ಧ್ವಜ ಹಿಡಿದು ಪಥಸಂಚಲನ ಮಾಡುವುದಾಗಿ ಭೀಮ್ ಆರ್ಮಿ ಘೋಷಿಸಿಕೊಂಡಿದೆ. ಇದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಹಿತ ಕೆಲವರು ಪ್ರಕಟಣೆ ನೀಡುತ್ತಿದ್ದಾರೆ.
ಆದರೆ ಈ ಫೋಟೋ ಮೂಲತಃ ಆರ್ ಎಸ್ಎಸ್ ಪಥಸಂಚಲನದ ಫೋಟೋವೇ ಆಗಿದೆ ಎಂದು ಆರ್ ಎಸ್ಎಸ್ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ. ಆರ್ ಎಸ್ಎಸ್ ನ ಸಮವಸ್ತ್ರದಲ್ಲಿ ಖಾಕಿ ಮತ್ತು ಧ್ವಜ ಕೇಸರಿ ಬಣ್ಣದಲ್ಲಿರುತ್ತದೆ. ಈ ಫೋಟೋದಲ್ಲಿ ಧ್ವಜಕ್ಕೆ ಮತ್ತು ಪ್ಯಾಂಟ್ ಗೆ ನೀಲಿ ಬಣ್ಣ ಮಾಡಲಾಗಿದೆ.
ಇದು ಹಿಂದೆ ಯಾವತ್ತೋ ನಡೆದ ಆರ್ ಎಸ್ಎಸ್ ಪಥಸಂಚಲನದ್ದೇ ಎಡಿಟೆಡ್ ಫೋಟೋ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದಕ್ಕೂ ಆರ್ ಎಸ್ಎಸ್ ಫೋಟೋನೇ ಬೇಕಾಯ್ತಾ ಎಂದು ಕಾಲೆಳೆದಿದ್ದಾರೆ.