ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಇದೀಗ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. 9 ದಿನಗಳ ವಿರಾಮದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದಿಂದ ಆರಂಭಗೊಂಡಿದೆ. ಈ ಯಾತ್ರೆಯು ಆರಂಭವಾಗಿ 110 ದಿನಗಳು ಕಳೆದಿದ್ದು, ಇದುವರೆಗೆ 3 ಸಾವಿರ ಕಿಲೋಮೀಟರ್ ಸಂಚರಿಸಿದೆ. ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಹರಿಯಾಣವನ್ನು ದಾಟಿ ಈಗ ಉತ್ತರ ಪ್ರದೇಶಕ್ಕೆ ಬಂದಿದೆ. ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಇದು ಭಾರತದ ಇತಿಹಾಸದಲ್ಲಿ ಅತಿ ಉದ್ದದ ಪಾದಯಾತ್ರೆಯಾಗಿದೆ. ಜನವರಿ 26ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ಕೊನೆಗೊಳ್ಳಲಿದೆ. ನಂತರ ಈ ಯಾತ್ರೆಯ ಸಂದೇಶವನ್ನು ಹರಡುವ ಉದ್ದೇಶದಿಂದ ಕಾಂಗ್ರೆಸ್ ಹಾಥ್ ಸೇ ಹಾಥ್ ಜೋಡೋ ಅಭಿಯಾನವನ್ನು ಪ್ರಾರಂಭಿಸುತ್ತದೆ.