ಕೋಲಾರ: ಹಣದ ಆಸೆಗಾಗಿ ಮದ್ಯ ಸೇವನೆ ಮಾಡಿ ಬೆಟ್ಟಿಂಗ್ ಕಟ್ಟಿ ಪ್ರಾಣ ಕಳೆದುಕೊಂಡ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದುವೆಯಾದ ವರ್ಷದೊಳಗೆ ಬೆಟ್ಟಿಂಗ್ ಚಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ಯುವಕನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ₹10 ಸಾವಿರ ಹಣಕ್ಕೆ ಆಸೆ ಬಿದ್ದು, ಒಂದೇ ಸಮಯದಲ್ಲಿ ಒಂದು ಹನಿಯೂ ನೀರು ಬೆರೆಸದೆ ಐದು ಬಾಟಲಿ ಮದ್ಯವನ್ನು ಸೇವಿಸಿದ್ದಾನೆ. ಆದ್ರೆ, ಮದ್ಯ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆಯೇ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾನೆ.
ಇದೇ ಪೂಜಾರಹಳ್ಳಿ ಗ್ರಾಮದ ವೆಂಕಟರಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರೊಂದಿಗೆ ಬೆಟ್ಟಿಂಗ್ ಕಟ್ಟಿದ್ದ. ಐದು ಬಾಟಲ್ ಮದ್ಯಕ್ಕೆ ಒಂದು ಹನಿ ನೀರನ್ನೂ ಬೆರೆಸದೇ ಕುಡಿಯುವುದಾಗಿ ಎದುರಾಳಿ ವ್ಯಕ್ತಿಯೊಂದಿಗೆ 10 ಸಾವಿರ ರೂ. ಹಣಕ್ಕೆ ಬಾಜಿ ಕಟ್ಟಿದ್ದ.
ಈ ವೇಳೆ ನೀನು 5 ಬಾಟಲಿ ಎಣ್ಣೆಯನ್ನು ರಾ ಹೊಡೆದರೆ (ನೀರು ಬೆರೆಸದೆ) ನಾನೊಬ್ಬನೇ 10 ಸಾವಿರ ರೂ. ಕೊಡುವುದಾಗಿ ವೆಂಕಟರೆಡ್ಡಿ ಸವಾಲು ಹಾಕಿದ್ದ. ಮದ್ಯ ಸೇವನೆಯಲ್ಲಿ ನಾನೆಂದಿಗೂ ಸೋತಿಲ್ಲವೆಂದು ಕಾರ್ತಿಕ್ ಜಿದ್ದಿಗೆ ಬಿದ್ದು ಸ್ವಲ್ಪನೂ ನೀರು ಹಾಕದೆ ಮದ್ಯ ಸೇವನೆ ಮಾಡಿದ್ದೇ, ಇದೀಗ ಪ್ರಾಣವನ್ನು ಕಳೆದುಕೊಳ್ಳುವಂತೆ ಮಾಡಿದೆ.