ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಸಿಎಂ ಆದೇಶದ ಮೇರೆಗೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ದುರ್ಘಟನೆಗೆ ಆರ್‌ಸಿಬಿ ಆಯೋಜಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ನಿಖಿಲ್ ಸೋಸಲೆ ಅವರನ್ನ ಬಂಧಿಸಲಾಗಿದೆ. ಇದೀಗ ಪತಿಯ ಬಂಧನವನ್ನು ಖಂಡಿಸಿ, ಪತ್ನಿ ಮಾಳವಿಕಾ ನಾಯ್ಕ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಬಂಧನಕ್ಕೆ ತಡೆ ನೀಡುವಂತೆ ಅರ್ಜಿ ಮೂಲಕ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಸಿಎಂ ಆದೇಶಾನುಸಾರ ನಿಖಿಲ್ ಅವರನ್ನು ಕಾನೂನುಬಾಹಿರವಾಗಿ ಬಂಧನ ಮಾಡಲಾಗಿದೆ ಎಂದು ನಿನ್ನೆಯ ) ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಆಧಾರವಾಗಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ತನಿಖೆಯನ್ನೇ ನಡೆಸದೇ ಸಿಎಂ ಆದೇಶಾನುಸಾರ ಬಂಧಿಸಲಾಗಿದೆ. ಕಾನೂನು, ಸಂವಿಧಾನ ಕಡೆಗಣಿಸಿ ಬಂಧಿಸಲಾಗಿದ್ದು, ಈ ಮೂಲಕ ನಿಖಿಲ್ ಸೋಸಲೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೇ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.