ಆನೇಕಲ್: ಬೆಂಗಳೂರಿನ ಹುಳಿಮಾವು ಸಮೀಪ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡರಿಸಿ ಸೂಟ್ ಕೇಸ್ ನಲ್ಲಿ ತುಂಬಿದ ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅದನ್ನೂ ಮೀರಿ ಭಯಾನಕ ಅಂತ್ಯ ಕಾಣುತ್ತಿದೆ. ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಅನಿಲ್ ಸಾಂಬೇಕರ್ ರನ್ನು ಕೊಲೆ ಮಾಡಿದ್ದಾನೆ.
ಇಬ್ಬರೂ ಹುಳಿಮಾವು ಸಮೀಪ ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಅದೇ ಸಿಟ್ಟಿನಲ್ಲಿ ಪತ್ನಿಯನ್ನು ಕೊಲೆ ಮಾಡಿದ ಪಾಪಿ ಪತಿ ಮೃತದೇಹವನ್ನು ತುಂಡು ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದಾನೆ.
ಬಳಿಕ ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಫೋನ್ ಮಾಡಿ ನಡೆದ ಘಟನೆ ವಿವರಿಸಿದ್ದಾನೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹುಳಿಮಾವು ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ವಾಷ್ ರೂಂನಲ್ಲಿ ಟ್ರಾಲಿ ಬ್ಯಾಗ್ ನಲ್ಲಿ ಮೃತದೇಹವಿತ್ತು ಎಂದು ಪೊಲೀಸರು ಹೇಳಿದ್ದರು. ಮಾರ್ಚ್ 25 ರಂದೇ ಪತಿ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಎರಡು ದಿನದ ಬಳಿಕ ಪತಿ ಪತ್ನಿ ಮನೆಯವರಿಗೆ ಕರೆ ಮಾಡಿದ್ದಾನೆ. ಬಳಿಕ ತನ್ನ ಪಕ್ಕದ ಮನೆಯವರಿಗೆ ಪತ್ನಿ ಕಾಣೆಯಾಗಿದ್ದಾಳೆ ಎಂದು ಹೇಳಿ ಮನೆಯಿಂದ ಹೊರನಡೆದಿದ್ದಾನೆ.