ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರು ಉತ್ತರ ಭಾಗದ ಬಾಬುಸಾಬ್ ಪಾಳ್ಯದ ಸಮೀಪ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ವರದಿಯಾಗಿದೆ. ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಇಂದು ಅಪರಾಹ್ನದ ಬಳಿಕ ಭಾರೀ ಮಳೆಯಾಗಿತ್ತು. ಪರಿಣಾಮ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು ಹಲವರು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆಯಿದೆ. ಈ ಪೈಕಿ ಮೂವರ ಮೃತದೇಹವನ್ನು ಹೊರ ತೆಗೆಯಲಾಗಿದೆ. ಸುಮಾರು 16 ಕಾರ್ಮಿಕರು ಸಿಲುಕಿರುವ ಶಂಕೆಯಿದೆ.
ಕಟ್ಟಡ ಕುಸಿದ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕರೆ ಮಾಡಿದ್ದಾರೆ. ಶಾಸಕ ಭೈರತಿ ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಹು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ಕುಸಿದು ಬೀಳುತ್ತಿರುವ ದೃಶ್ಯ ವೈರಲ್ ಆಗಿದೆ.