ಬೆಳ್ತಂಗಡಿ: ಇತ್ತೀಚೆಗಿನ ದಿನಗಳಲ್ಲಿ ವಿವಾಗಳಿಂದಲೇ ಸುದ್ದಿಯಾಗುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಈಗ ತಮ್ಮದೇ ಕ್ಷೇತ್ರದ ಜನರಿಗೆ ದೇವರ ಹೆಸರು ಹೇಳಿಕೊಂಡು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೊನ್ನೆಯಷ್ಟೇ ಮಾರಿಗುಡಿ ಮುಂದೆ ನಾನು ಯಾವುದೇ ಕಮಿಷನ್ ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ ಎಂದು ಪ್ರಮಾಣ ಮಾಡಿ ಸುದ್ದಿಯಾಗಿದ್ದ ಹರೀಶ್ ಪೂಂಜಾ ದೇವರ ಹೆಸರಿನಲ್ಲಿ ತಮ್ಮದೇ ಕ್ಷೇತ್ರದ ಜನರಿಗೆ ಧಮ್ಕಿ ಹಾಕಿದ ಆರೋಪ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.
ಮಳೆಯಿಂದಾಗಿ ಹಾನಿಗೊಳಗಾಗಿದ್ದ ಸವಣಾಲು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಜನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ತಡವಾಗಿ ಬಂದಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಶಾಸಕರು, ನನ್ನನ್ನು ಪ್ರಶ್ನೆ ಮಾಡಿದರೆ ದೇವರ ಮೂಲಕ ಶಾಪ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಆದರೆ ಜನ ಈ ಬೆದರಿಕೆಗೆ ಜಗ್ಗದೇ ವಿರೋಧ ವ್ಯಕ್ತಪಡಿಸಿದಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಜನರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದೂ ಹೇಳಲಾಗಿದೆ. ಕೆಲವು ದಿನಗಳ ಹಿಂದೆ ಪೊಲೀಸರಿಗೆ ನಿಂದಿಸಿದ್ದಕ್ಕೆ ಹರೀಶ್ ಪೂಂಜಾ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಇದೀಗ ಜನರಿಗೇ ಶಾಪ ಹಾಕುವ ಎಚ್ಚರಿಕೆ ನೀಡಿ ಸುದ್ದಿಯಾಗಿದ್ದಾರೆ.