Publish Date: Tue, 26 Mar 2024 (13:26 IST)
Updated Date: Tue, 26 Mar 2024 (13:28 IST)
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಕಿಚ್ಚ ಸುದೀಪ್ ಬರ್ತಾರಾ ಎಂಬ ಪ್ರಶ್ನೆಗೆ ಮಾಜಿ ಸಿಎಂ, ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮೇಲೆ ಕಿಚ್ಚನಿಗೆ ವಿಶೇಷ ಗೌರವವಿದೆ. ಅವರನ್ನು ಮಾಮ ಎಂದೇ ಕರೆಯುತ್ತಾರೆ. ಇದೇ ಅಭಿಮಾನದಿಂದ ಕಿಚ್ಚ ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದರು.
ಇದೀಗ ಲೋಕಸಭೆ ಚುನಾವಣೆ ವೇಳೆ ಬೊಮ್ಮಾಯಿ ಪರ ಹಾವೇರಿಯಲ್ಲಿ ಕಿಚ್ಚ ಪ್ರಚಾರ ಮಾಡಲಿದ್ದಾರಾ ಎಂದು ಪ್ರಶ್ನೆ ಕೇಳಿದಾಗ ಅವರು ಇದನ್ನು ನಮ್ಮ ನಾಯಕರು ನಿರ್ಧರಿಸುತ್ತಾರೆ ಎಂದಿದ್ದಾರೆ. ಆದರೆ ಕೆಲವು ಸೆಲೆಬ್ರಿಟಿಗಳು ಪ್ರಚಾರಕ್ಕೆ ಬರಲಿದ್ದಾರೆ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೆ ಮೊದಲು ಸುದೀಪ್ ರನ್ನು ಲೋಕಸಭೆ ಚುನಾವಣೆ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದಾಗ ಯಾವುದೇ ಪಕ್ಷದವರೂ ನನ್ನನ್ನು ಇದುವರೆಗೆ ಕರೆದಿಲ್ಲ. ಕರೆದಾಗ ನೋಡೋಣ ಎಂದಿದ್ದರು. ಸದ್ಯಕ್ಕೆ ಸುದೀಪ್ ಮ್ಯಾಕ್ಸ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಈ ಬಾರಿ ಅವರು ಪ್ರಚಾರಕ್ಕೆ ಬರುತ್ತಾರಾ ಎಂದು ಕಾದುನೋಡಬೇಕಿದೆ.