ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಅವರ ತಂದೆಯನ್ನು ಜೈಲಿಗೆ ಕಳುಹಿಸಿದ್ದೇ ವಿಜಯೇಂದ್ರ ಎಂದಿದ್ದಾರೆ.
ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಬರೀ ಕಲೆಕ್ಷನ್ ಮಾಸ್ಟರ್ ಇವ. ರಾಜ್ಯಾಧ್ಯಕ್ಷ ಆಗಿ ಏನು ಮಾಡ್ಯಾನ? ಇವ ಸುಡುಗಾಡೂ ಮಾಡಿಲ್ಲ. ಬರೀ ಅವನ ಅಪ್ಪ ಯಡಿಯೂರಪ್ಪನ್ನ ಜೈಲಿಗೆ ಕಳುಹಿಸಿದ್ದೇ ಇವ. ಯಡಿಯೂರಪ್ಪ ಜೈಲಿಗೆ ಕಳುಹಿಸಿದ್ದೇ ಇವತ್ತಿನ ರಾಜ್ಯಾಧ್ಯಕ್ಷ. ಧೀಮಂತ ಪೂಜ್ಯ ತಂದೆಯನ್ನು ಜೈಲಿಗೆ ಕಳುಹಿಸಿದ್ದಂತಹ ಧೀಮಂತ ನಾಯಕ. ತಂದೆಯ ಹೆಸರು ಹೇಳಿಕೊಂಡು ಯಾವ ಯಾವ ಸೈನ್ ಮಾಡ್ಯಾನೋ ಗೊತ್ತಿಲ್ಲ. ನಿನ್ನ ಕೈಯಲ್ಲಿ ನೀಗೋದಿಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗು. ಹೊಸ ರಾಜ್ಯಾಧ್ಯಕ್ಷ ಬರ್ತಾರೆ. ನನಗೇನಾದರೂ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ 130 ಸೀಟು ತರ್ಲಿಲ್ಲ ಅಂದರೆ ರಾಜಕೀಯ ನಿವೃತ್ತಿಯಾಗ್ತೀನಿ.
ನಿನಗೆ ತಾಕತ್ತಿದ್ದರೆ ಬಾ. ಅವರನ್ನು ಕರೆಸ್ತೀನಿ, ಹೊಡೆಸ್ತೀನಿ ಎನ್ನೋದಲ್ಲ. ನೀನು ಹೊಡೆದರೆ ನಾವೂ ಸುಮ್ಮನೇ ಹೊಡೆಸ್ಕೊಂಡು ಕೂರೋ ಮಗ ಅಲ್ಲ. ನಾವು ಗಾಂಧಿ ಅಲ್ಲ, ನಾವು ಸುಭಾಷ್ ಚಂದ್ರಬೋಸ್. ಗಾಂಧಿ ಹಾಗೆ ಎಡಕ್ಕೆ ಹೊಡೆದರೆ ಬಲಕ್ಕೆ ತೋರಿಸುವವರಲ್ಲ. ನಾವು ನೇತಾಜಿ ಫಾಲೋವರ್ ಗಳು. ಒಂದು ಹೊಡೆದರೆ ನಾಲ್ಕು ಹೊಡೀತೀವಿ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.