Select Your Language

Notifications

webdunia
webdunia
webdunia
webdunia

ಅಡ್ಜಸ್ಟ್ ಮೆಂಟ್ ರಾಜಕಾರಣಕ್ಕೆ ಬಲಿಯಾದೆ: ಉಚ್ಛಾಟನೆ ಬಳಿಕ ಯತ್ನಾಳ್ ಮೊದಲ ಸಂದೇಶದಲ್ಲಿ ಏನಿದೆ ನೋಡಿ

Basanagowda Patil Yatnal

Krishnaveni K

ಬೆಂಗಳೂರು , ಗುರುವಾರ, 27 ಮಾರ್ಚ್ 2025 (12:12 IST)
Photo Credit: Facebook
ಬೆಂಗಳೂರು: ಬಿಜೆಪಿಯಿಂದ ಆರು ವರ್ಷಗಳಿಗೆ ಉಚ್ಛಾಟನೆಯಾದ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಷಿಯಲ್ ಮೀಡಿಯಾದಲ್ಲಿ ಸಂದೇಶವೊಂದನ್ನು ಬರೆದಿದ್ದು ಅಡ್ಜಸ್ಟ್ ಮೆಂಟ್ ರಾಜಕಾರಣಕ್ಕೆ ಬಲಿಯಾದೆ ಎಂದಿದ್ದಾರೆ. ಅವರ ಸಂದೇಶದ ವಿವರ ಇಲ್ಲಿದೆ ನೋಡಿ.

ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ.

ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ.
ಪಕ್ಷದ ವಿರುದ್ದ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ  ಪಕ್ಷದ  ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ.

ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕ ಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ 'ಅಡ್ಜಸ್ಟ್ಮೆಂಟ್ ರಾಜಕಾರಣದಿಂದ' ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ.

ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ ವಿ.ಎಸ.ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ  ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನೆಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾದರು. ಮಾತು ಕಡಿಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನು ಸಂಘಟಿಸಿದ್ದು ಪಕ್ಷ ಮರೆಯಲಾಗದ ಮಾಣಿಕ್ಯ  ಡಾ. ವಿ.ಎಸ್.ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಆಚಾರ್ಯರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ.
ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ.  ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ 'ಅಪಥ್ಯ' ವಾಗಿದೆ.

ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ.

Nation First, Party next, Self last ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

Basanagouda Patil Yatnal: ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲಿದ್ದಾರೆ ಗೊತ್ತಾ