ಮೈಸೂರು: ಈ ಬಾರಿಯ ಕೇಂದ್ರ ಬಜೆಟ್ ಕರ್ನಾಟಕ ಹಾಗೂ ದೇಶದ ಹಿತದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ದೂರಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರದೃಷ್ಟಿ ಇಲ್ಲದ ಬಜೆಟ್. ಈ ಮೂಲಕ ಮೋದಿ ಸರ್ಕಾರ ಕರ್ನಾಟಕಕ್ಕೆ ಚೆಂಬು ಕೊಡುವುದನ್ನು ಮುಂದುವರಿಸಿದೆ ಎಂದು ಟೀಕೆ ಮಾಡಿದರು.
ಬಜೆಟ್ ಪೂರ್ವಭಾವಿ ಚರ್ಚೆ ವೇಳೆ ಕರ್ನಾಟಕ ಸರ್ಕಾರ ಹಲವು ಬೇಡಿಕೆಗಳನ್ನು ಮುಂದಿಟ್ಟಿತ್ತು. ಆದರೆ ಅದು ಬೇಡಿಕೆಯಾಗಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಆಗಿದ್ದು, ಇದರಲ್ಲಿ ಸಾಲದ ಮೊತ್ತ 15.68 ಲಕ್ಷ ಕೋಟಿ ಹಾಗೂ ಬಡ್ಡಿ ಪಾವತಿಗೆ 12.70 ಲಕ್ಷ ಕೋಟಿ ನೀಡುತ್ತಿದೆ. ಈ ದೇಶದ ಮೇಲೆ ಸರ್ಕಾರ 202 ಲಕ್ಷ- 205 ಲಕ್ಷ ಕೋಟಿ ಸಾಲ ಹೊರಿಸಿದೆ ಎಂದು ಟೀಕಿಸಿದರು.
ಕರ್ನಾಟಕ ತೆರಿಗೆ ಪಾವತಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಹೆಚ್ಚಿನ ಪಾಲು ನೀಡಲಾಗಿದೆ. ಇದೊಂದು ರೀತಿ ಬಿಹಾರ ಮತ್ತು ಆಂಧ್ರದ ಬಜೆಟ್ ಇದ್ದಂತಿದೆ. ರಾಜ್ಯದ ಯೋಜನೆಗಳಾದ ಮೇಲೆದಾಟು, ಮಹದಾಯಿ, ಕೃಷ್ಣಾ, ಭದ್ರಾ ಈ ಯಾವ ಯೋಜನೆಗಳಿಗೂ ಅನುದಾನ ನೀಡಿಲ್ಲ ಎಂದು ದೂರಿದರು.