ಬೆಂಗಳೂರು : 2023 ರಲ್ಲಿ ಭಾರತದಲ್ಲಿ ಸ್ವಿಗ್ಗಿ ಮೂಲಕ 2.9 ಕೋಟಿ ಮಂದಿ ದೋಸೆ ಆರ್ಡರ್ ಮಾಡಿದ್ದಾರೆ. ಇದರಲ್ಲಿ ಬೆಂಗಳೂರು ನಗರದ್ದೇ ಸಿಂಹ ಪಾಲು. ದೆಹಲಿ, ಮುಂಬೈ, ಮತ್ತು ಕೋಲ್ಕತ್ತಾ ನಗರಗಳ ಜನರು ಒಟ್ಟಾಗಿ ಮಾಡಿರುವ ದೋಸೆ ಆರ್ಡರ್ ಗಳಿಗಿಂತ ಬೆಂಗಳೂರಿಗರ ದೋಸೆ ಪ್ರೇಮ ದುಪಟ್ಟಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಇಂದು ಜಗತ್ತಿನಾದ್ಯಂತ “ ವಿಶ್ವ ದೋಸೆ ದಿನ 2024” ಆಚರಿಸಲ್ಪಡುತ್ತಿದೆ. ಇದೇ ವೇಳೆ ಬೆಂಗಳೂರಿಗೆ ವಿಶ್ವ ದೋಸೆಯ ರಾಜಧಾನಿ ಎಂಬ ಅಭಿದಾನವೂ ಸಹ ದೊರೆತಿದೆ.
ಬೆಂಗಳೂರಿನಲ್ಲಿ ಸಿಗುವ ವೈವಿಧ್ಯಮಯ ದೋಸೆಗಳೂ ಸಹ ಬೇರೆ ನಗರಗಳಲ್ಲಿ ಸಿಗುವುದು ಕಷ್ಟಸಾಧ್ಯ. ಸಾಮಾನ್ಯ ಮಸಾಲೆ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಬೆಣ್ಣೆದೋಸೆಗಳ ಹೊರತಾಗಿ ಇಲ್ಲಿ ನೂಡಲ್ಸ್ ದೋಸೆ, ಮಂಚೂರಿ ದೋಸೆ, ಮುಳಬಾಗಿಲು ದೋಸೆ, ದಾವಣಗೆರೆ ಬೆಣ್ಣೆ ದೋಸೆ, ದೊರೆಯುತ್ತವೆ. ಜೊತೆಗೆ ಬೆಂಗಳೂರಿನ 99 ವೆರೈಟಿ ದೋಸೆ ಗಾಡಿಗಳು ಬೇರೆಲ್ಲೂ ಕಂಡುಬರುವುದಿಲ್ಲ.