ಹೇಯ್ ಸುಮ್ನೆ ಕೂತ್ಕೋಳಯ್ಯ, ಎಷ್ಟು ಮಾತಾಡ್ತೀಯಾ? ಯಾವ್ ಡಿಪಾಟ್‍ಮೆಂಟ್ ನಿಂದು? ನಿಂಗೆ ಬಿಟ್ಟಿ ಎಜುಕೇಷನ್ ಬೇಕಾ? ಸರಕಾರಿ ಸ್ಕೂಲ್ ಆಪ್ಷನ್ ಇತ್ತಲ್ಲಾ, ಸೇರಿಸಬೇಕಾಗಿತ್ತು. ಫೀಸ್ ಕಟ್ಟೋಕೆ ಆಗಲ್ವಾ? ಸುಮ್ನೆ ಬಂದು ನಮ್ಮ ಟೈಂ ವೆಸ್ಟ್ ಮಾಡಿಸ್ತೀರಾ?ಹೀಗೆಂದು ಖಾಸಗಿ ಶಾಲೆಗಳ ಶುಲ್ಕ ವಸೂಲಿ ನಿಯಂತ್ರಣಕ್ಕೆ ದೂರು ನೀಡಲು ಬಂದ ಸಾರ್ವಜನಿಕರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.
ಜಿಲ್ಲಾಧಿಕಾರಿ ಉದ್ಧಟತನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ, ಮುಖ್ಯಮಂತ್ರಿ, ಶಿಕ್ಷಣ ಸಚಿವ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದೆ.
ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ನೀಡುವಂತೆ ಬಲವಂತ ಮಾಡಿದರೆ ಜಿಲ್ಲಾ ವ್ಯಾಪ್ತಿಯಲ್ಲಿನ 'ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ'ಕ್ಕೆ ದೂರು ನೀಡಬಹುದು. ಈ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಯೇ ಮುಖ್ಯಸ್ಥರು. ಹೀಗಾಗಿ ದೂರು ನೀಡಲು ತೆರಳಿದ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿ ಮಂಜುನಾಥ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.