ಬೆಂಗಳೂರು: ಸ್ಥಳೀಯ ಚುನಾವಣೆಗಳಲ್ಲಿ ಇನ್ನು ಮತದಾನ ಮಾಡಲು ಇವಿಎಂ ಮೆಷಿನ್ ಬದಲು ಬ್ಯಾಲೆಟ್ ಪೇಪರ್ ಮೊರೆ ಹೋಗಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿದೆ.
ಇವಿಎಂ ಮೆಷಿನ್ ಹ್ಯಾಕ್ ಮಾಡಿ ಬಿಜೆಪಿ ತನಗೆ ಬೇಕಾದಂತೆ ಫಲಿತಾಂಶ ಪಡೆಯುತ್ತದೆ ಎಂದು ಕಾಂಗ್ರೆಸ್ ಆರೋಪವಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ವರೆಗೆ ದೂರು ನೀಡಿಯೂ ಪ್ರಯೋಜನವಾಗಿರಲಿಲ್ಲ. ಆದರೆ ಈಗ ತನ್ನ ಆಡಳಿತವಿರುವ ಕರ್ನಾಟಕದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ತೀರ್ಮಾನಕ್ಕೆ ಬಂದಿದೆ.
ಇದಕ್ಕೆ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ. ಇವಿಎಂ ಹ್ಯಾಕ್ ಆಗುತ್ತದೆ ಎಂಬುದಕ್ಕೆ ಇನ್ನೂ ಪುರಾವೆ ಸಿಕ್ಕಿಲ್ಲ. ಜಗತ್ತು ಕಾಲ ಕಳೆದಂತೆ ಮುಂದೆ ಓಡುತ್ತಿರುವಾಗ ನಾವು ಮಾತ್ರ ಹಳೆಯ ವಿಧಾನಕ್ಕೆ ಮರಳುತ್ತಿದ್ದೇವೆ ಎಂದು ಹಲವರು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದ ಇತ್ತೀಚೆಗಿನವರೆಗೂ ಬ್ಯಾಲೆಟ್ ಪೇಪರ್ ಬಳಸಲಾಗಿತ್ತು. ಆದರೆ ಬ್ಯಾಲೆಟ್ ಪೇಪರ್ ಬಳಸಿದಾಗಲೂ ಹಲವು ಬಾರಿ ಅಕ್ರಮ ನಡೆದಿದೆ. ಇದೇ ಕಾರಣಕ್ಕೆ ಇವಿಎಂ ಬಳಕೆ ಶುರು ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ಬ್ಯಾಲೆಟ್ ಪೇಪರ್ ಬೇಕು ಎನ್ನುತ್ತಿರುವುದು ಯಾಕಾಗಿ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.