ಬೆಂಗಳೂರು: ಬಿಜೆಪಿಯಲ್ಲಿ ಎಲ್ಲರೂ ಯತ್ನಾಳ್ ಮತ್ತು ವಿಜಯೇಂದ್ರ ಬಣದ ನಡುವಿನ ತಿಕ್ಕಾಟದ ಬಗ್ಗೆ ಗಮನಹರಿಸುತ್ತಿದ್ದರೆ ಇತ್ತ ಜನಾರ್ಧನ ರೆಡ್ಡಿ ಮತ್ತು ಬಿ ಶ್ರೀರಾಮುಲು ನಡುವೆ ವೈಮನಸ್ಯ ಹಠಾತ್ ಭುಗಿಲೆದ್ದಿದೆ.
ನಿನ್ನೆ ಇದ್ದಕ್ಕಿದ್ದಂತೆ ಬಿಶ್ರೀರಾಮುಲು ಬಿಜೆಪಿ ಸಭೆಯಲ್ಲಿ ಜನಾರ್ಧನ ರೆಡ್ಡಿ ವಿರುದ್ಧ ಆರೋಪ ಹೊರಿಸಿದ್ದು ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯ ಎಂಬಂತಿದ್ದ ಇಬ್ಬರ ನಡುವೆ ಅಂತಹದ್ದೇನಾಯಿತು ಎಂದು ಎಲ್ಲರೂ ಅಚ್ಚರಿಪಟ್ಟುಕೊಂಡರು.
ಆದರೆ ಇದೀಗ ಇಬ್ಬರ ನಡುವಿನ ವೈಮನಸ್ಯ ಬೀದಿ ಜಗಳವಾಗಿದೆ. ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕಿತ್ತಾಡುತ್ತಿದ್ದಾರೆ. ಈ ನಡುವೆ ಬಿ ಶ್ರೀರಾಮುಲು ಕಾಂಗ್ರೆಸ್ ಸೇರುವ ಮಾತುಗಳೂ ಕೇಳಿಬರುತ್ತಿದೆ. ಇತ್ತ ರೆಡ್ಡಿ ಇದೆಲ್ಲಾ ಸತೀಶ್ ಜಾರಕಿಹೊಳಿಯವರನ್ನು ಮಣಿಸಲು ಡಿಕೆಶಿ ಮಾಡಿರುವ ಪ್ಲ್ಯಾನ್ ಎಂದಿದ್ದಾರೆ.
ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಹುದ್ದೆಗೇರಲು ಇರುವ ಮುಳ್ಳು ಎಂದರೆ ಅದು ಸತೀಶ್ ಜಾರಕಿಹೊಳಿ. ಹೀಗಾಗಿ ಅವರನ್ನು ತಣ್ಣಗೆ ಮಾಡಲು ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆತರಲು ಡಿಕೆ ಶಿವಕುಮಾರ್ ಅವರೇ ತೆರೆಮರೆಯಲ್ಲಿ ಈ ನಾಟಕ ಮಾಡಿಸುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿಯೇ ಬಾಯ್ಬಿಟ್ಟಿದ್ದಾರೆ.
ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಈಗ ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವದಂತಿಯೂ ಹೊಂದಾಣಿಕೆ ರಾಜಕಾರಣದ ಭಾಗವಾಗಿರಬಹುದೇ ಎಂದು ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಗೆ ಸಹಾಯ ಮಾಡಲೆಂದೇ ಈ ಹಿಂದೆ ಬಿಜೆಪಿಯವರು ಮುಡಾ ಹಗರಣ ನೆಪದಲ್ಲಿ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ನಡೆಸಿದ್ದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆರೋಪಿಸಿದ್ದರು. ಇದೀಗ ಡಿಕೆಶಿಗೆ ಸಹಾಯ ಮಾಡಲೆಂದೇ ಬಿಜೆಪಿಯ ಕೆಲವು ನಾಯಕರ ಕುಮ್ಮಕ್ಕಿನಿಂದಲೇ ಶ್ರೀರಾಮುಲು ಬಂಡಾಯವೆದ್ದಿದ್ದಾರೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.