ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೆ ಕಾರಣರಾದ ಸಚಿವ ಕೆಎಸ್ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತ ಸಂತೋಷ್ ಕೆ. ಪಾಟೀಲ್ ವಾಟ್ಸಪ್ ಮೆಸೇಜ್ ನಲ್ಲಿ ನನ್ನ ಸಾವಿಗೆ ಸಚಿವ ಈಶ್ವರಪ್ಪ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅವರ ಆರೋಪ ಡೆತ್ ನೋಟ್ ಗೆ ಸಮಾನ ಎಂದರು.
ಸಂತೋಷ್ ಪಾಟೀಲ ಈ ಹಿಂದೆಯೇ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದರು. ರಸ್ತೆ ಕಾಮಗಾರಿ ವಿಷಯದಲ್ಲಿ ಅವರಿಗೆ ಕಮಿಷನ್ ನೀಡಿದ್ದೇನೆ. ಇನ್ನೂ ಹೆಚ್ಚು ಕಮಿಷನ್ ಬೇಡಿಕೆ ಸಲ್ಲಿಸಿದ್ದರು. ಅವರ ಕಾಟ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಈಶ್ವರಪ್ಪ ಪ್ರಕರಣದ ಕುರಿತು ಏನು ಹೇಳಿದರು ಎಂಬುದು ಮುಖ್ಯವಲ್ಲ. ನೇರ ಆರೋಪ ಮಾಡಿರುವುದರಿಂದ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು. ಅಲ್ಲದೇ ಅವರ ವಿರುದ್ಧ ಸರಕಾರವೇ ಸೆಕ್ಷನ್ ೩೦೨ ಅನ್ವಯ ಪ್ರಕರಣ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.