ಬೆಂಗಳೂರು: ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ಸಂಜೆಯಿಂದ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದು, ಇಂದು ಸಂಜೆ ಮತ್ತೇ ಮಳೆ ಎಂಟ್ರಿಯಾಗಿದೆ. ಗಾಳಿ ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಆ ಮೂಲಕ ಸಿಟಿ ಮಂದಿ ಮತ್ತೆ ಕಂಗಾಲಾಗಿದ್ದಾರೆ. ಹಲವೆಡೆ ಸುರಿಯುತ್ತಿರುವ ಭಾರೀ ಮಳೆಗೆ ಮಲ್ಲೇಶ್ವರಂನ ಹಳ್ಳಿ ಮನೆ ಮುಂದೆ ಬೃಹದಾಕಾರ ಮರ ಧರೆಗುರುಳಿದು ಅವಾಂತರ ಸೃಷ್ಟಿಯಾಗಿದೆ.
ಈ ಪ್ರದೇಶದಲ್ಲಿ ಜೋರು ಮಳೆ:
ವಿಧಾನಸೌಧ, ಕೆ.ಆರ್.ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್ ಶಾಂತಿನಗರ ಮತ್ತು ರಿಚ್ಮಂಡ್ ಸರ್ಕಲ್, ಡಾಲರ್ಸ್ ಕಾಲೋನಿ, ಹೆಬ್ಬಾಳ, ಸಂಜಯ್ ನಗರ, ಬಿಇಎಲ್ ರೋಡ್, ಆರ್ ಟಿ ನಗರ, ಎಂಎಸ್ ರಾಮಯ್ಯ ಆಸ್ಪತ್ರೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕೆಂಗೀರಿ ಸುತ್ತಮುತ್ತ ಜಿಟಿ ಜಿಟಿ ಮಳೆ ಆರಂಭವಾಗಿದ್ದರೆ, ಜಯನಗರ 7ನೇ ಹಂತದಲ್ಲಿ ಸುಮಾರು 30 ನಿಮಿಷದಿಂದ ಜೋರು ಗಾಳಿ ಜೊತೆಗೆ ಧಾರಾಕಾರ ಮಳೆ ಸುರಿಯುತ್ತಿದೆ.
ಇನ್ನೂ ಹಲವೆಡೆ ಮ್ಯಾನ್ ಹೋಲ್ ಓಪನ್ ಆಗಿ ನೀರು ರಸ್ತೆಗೆ ಬಂದಿದೆ. ಪರಿಣಾಮ ಶಾಂತಿನಗರದ ಬಿಟಿಎಸ್ ರಸ್ತೆ ಕೆಸರು ಮಯವಾಗಿದೆ. ನೀರು ತುಬಿಕೊಂಡ ಹಿನ್ನಲೆ ಗುಂಡಿಗಳು ಕಾಣದಂತಾಗಿದ್ದು, ಬೈಕ್ ಸವಾರರು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೂಪೇನ ಅಗ್ರಹಾರದ ಬಳಿ ವಾಟರ್ ಲಾಗಿಂಗ್ ಆಗಿದ್ದು ಹೊಸೂರು ಮುಖ್ಯ ರಸ್ತೆ ಮೂಲಕ ನಗರದ ಒಳ ಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸುವುದು ಮತ್ತು ಸಹಕರಿಸುವುದು.<>