ಬೆಂಗಳೂರು: ಬಿಜೆಪಿಯ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಘೋರ ಅವಮಾನ ಮಾಡಿದ್ದಾರೆ, ಅಣ್ಣಾಮಲೈ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ಈಚೆಗೆ ಕಾರ್ಯಕ್ರಮವೊಂದರಲ್ಲಿ ಕರ್ನಾಕದ ಖಜಾನೆಯಲ್ಲಿ ದುಡ್ಡೇ ಇಲ್ಲ ಎಂದು ಸಂದರ್ಶಕಿಯೊಬ್ಬರು ಅಣ್ಣಾಮಲೈ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರು, ಕರ್ನಾಟಕದಲ್ಲಿ ಏನಾಗ್ತಿದೆ ಅಂದರೆ ಅಲ್ಲಿ ಪಾಕಿಸ್ತಾನದ ಟೆಕ್ನಿಕ್. ಪಾಕಿಸ್ತಾನ ತನ್ನ ಹಣೆಗೆ ಗನ್ ಇಟ್ಟುಕೊಳ್ಳುತ್ತದೆ. ಆಮೇಲೆ ಪಾಕಿಸ್ತಾನ ಸರ್ಕಾರ ಅಮೇರಿಕಾ ನೋಡಿ ಹೇಳುತ್ತೆ. ನೀವು ನಮಗೆ ದುಡ್ಡು ಕೊಟ್ಟಿಲ್ಲಾಂದ್ರೆ ನಾವು ನಮ್ಮನ್ನೇ ಶೂಟ್ ಮಾಡಿಕೊಳ್ತೇವೆ ಅಂತ. ಪಾಕಿಸ್ತಾನ ತಾನೇ ಸುತ್ತುಹೋಗುವೆ ಅನ್ಸುತ್ತೇ, ಅಮೇರಿಕಾ ಹೆದರಿ ದುಡ್ಡು ಕೊಡುತ್ತೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡ್ತಿರೋದೂ ಅದೇ. ಗ್ಯಾರೆಂಟಿ ಭರವಸೆ ಕೊಟ್ಟಿದ್ದು ನೀವು, ಗ್ಯಾರೆಂಟಿ ಕೊಡ್ತಿರೋದು ನೀವು. ಈಗ ಕೇಂದ್ರ ಸರ್ಕಾರ ಅದಕ್ಕೆ ಯಾಕೆ ಸಹಾಯ ಮಾಡಬೇಕು ಎಂದು ಹೇಳಿದ್ದರು.
ಇವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಬರೆದು ಅಣ್ಣಾಮಲೈ ವಿರುದ್ಧ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ.
ಕರ್ನಾಟಕ ಪಾಕಿಸ್ತಾನದ ರೀತಿಯಂತೆ.
ಬಿಜೆಪಿ ಹಾಗೂ ಅದರ ಮಿತ್ರರು ಕನ್ನಡಿಗರಿಗೆ ಇನ್ನೆಷ್ಟು ಅವಮಾನ ಮಾಡಲು ಯೋಜಿಸಿದ್ದಾರೆ?
ಕರ್ನಾಟಕದ ಮಹಿಳೆಯರನ್ನು ದಾರಿ ತಪ್ಪಿದವರು ಎಂದಾಯ್ತು, ಕನ್ನಡಿಗರನ್ನು ಕುಡುಕರು ಎಂದಾಯ್ತು, ಈಗ ಕನ್ನಡಿಗರು ಪಾಕಿಸ್ತಾನಿಗಳಂತೆ. ಕನ್ನಡಿಗರು ಹಾಗೂ ಕರ್ನಾಟಕವನ್ನು ಅವಮಾನಿಸುವುದು ಬಿಜೆಪಿಗೆ ಸುಲಭದ ಚಟವಾಗಿದೆ.
ಬಿಜೆಪಿಯ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಘೋರ ಅವಮಾನ ಮಾಡಿದ್ದಾರೆ, ಅಣ್ಣಾಮಲೈ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ?
ಅನ್ನ ತಿಂದು, ನೀರು ಕುಡಿದು, ಸಂಬಳ ಪಡೆದು ಬದುಕಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ?
ಈ ಅಣ್ಣಾಮಲೈ ತನ್ನ ಬದುಕಿನಲ್ಲಿ ಐಡೆಂಟಿಟಿ ಪಡೆದದ್ದು ಕರ್ನಾಟಕದಲ್ಲಾ ಪಾಕಿಸ್ತಾನದಲ್ಲಾ?
@BJP4Karnataka
ನಾಯಕರು ಉತ್ತರಿಸಬೇಕು.
ಕನ್ನಡಿಗರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಕ್ಕನ್ನು ಕೇಂದ್ರದಿಂದ ಕೇಳುತ್ತಿದ್ದಾರೆಯೇ ಹೊರತು ಬಿಕ್ಷೆಯನ್ನಲ್ಲ, ಕರ್ನಾಟಕ ತೆರಿಗೆ ಸಂಗ್ರಹದಲ್ಲಿ 2ನೇ ಅತಿ ದೊಡ್ಡ ರಾಜ್ಯ.
ಕನ್ನಡಿಗರ ಬೆವರಿನ ಹಣದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆಯೇ ಹೊರತು ಒಕ್ಕೂಟ ಸರ್ಕಾರದ ಬಿಕ್ಷೆಯಲ್ಲಿ ಕನ್ನಡಿಗರು ಬದುಕುತ್ತಿಲ್ಲ.
ತಮ್ಮ ಹಕ್ಕನ್ನು ಕೇಳುವ ಕನ್ನಡಿಗರನ್ನು ಪಾಕಿಸ್ತಾನಕ್ಕೆ ಹೋಲಿಸುವ ಬಿಜೆಪಿಯನ್ನು ಕನ್ನಡಿಗರು ತಿರಸ್ಕರಿಸುವುದು ನಿಶ್ಚಿತ, ಇಲ್ಲಿ ತಿರಸ್ಕಾರಗೊಂಡವರು ತಮ್ಮ ಪ್ರೀತಿಯ ಪಾಕಿಸ್ತಾನಕ್ಕೆ ಹೋಗಿ ರಾಜಕಾರಣ ಮಾಡಲಿ!<>