ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಕಳೆದ ಎರಡು ತಿಂಗಳಿನಿಂದ ಹಣ ಬರದೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅತ್ತ ಹಣವೂ ಕ್ರೆಡಿಟ್ ಆಗಿಲ್ಲ, ಇತ್ತ ಅಕ್ಕಿಯೂ ಸಿಕ್ಕಿಲ್ಲ ಎಂಬ ಸ್ಥಿತಿ ಫಲಾನುಭವಿಗಳದ್ದಾಗಿದೆ. ಅಕ್ಕಿ, ಹಣದ ಬದಲು ಬೇರೆ ಬೇಳೆಯಾದರೂ ಕೊಡಿ ಎಂದರೂ ಕೊಡುತ್ತಿಲ್ಲ. ಈ ಚಂದಕ್ಕೆ ಅನ್ನಭಾಗ್ಯ ಯೋಜನೆ ಯಾಕೆ ಘೋಷಣೆ ಮಾಡಬೇಕಿತ್ತು ಎಂದು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆ.ಜಿ ಬಾಬ್ತು ಹಣ ನೀಡುತ್ತಿತ್ತು. ಇದು ನೇರವಾಗಿ ಫಲಾನುಭವಿಗಳ ಖಾತೆಗೆ ಕ್ರೆಡಿಟ್ ಆಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಹಣ ಕ್ರೆಡಿಟ್ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದರ ಬಗ್ಗೆ ಪಡಿತರ ವಿತರಕರಿಂದಲೂ ಅಸಮಾಧಾನ ಕೇಳಿಬಂದಿದೆ. ಸರ್ಕಾರ ಹಣ ನೀಡಿಲ್ಲ ಎಂದು ಪ್ರತಿನಿತ್ಯ ನಮ್ಮ ಬಳಿ ಬಂದು ಸಾರ್ವಜನಿಕರು ವಾಗ್ವಾದ ಮಾಡುತ್ತಾರೆ. ಸರ್ಕಾರ ಕೊಡದೇ ಹೋದರೆ ನಾವು ಏನು ಮಾಡೋಣ ಎನ್ನುವುದು ಅವರ ಅಳಲು. ಇತ್ತೀಚೆಗಷ್ಟೇ ಸಚಿವ ಮುನಿಯಪ್ಪ 5 ಕೆ.ಜಿ. ಅಕ್ಕಿಯ ಹಣದ ಬದಲು ಬೇಳೆ, ಎಣ್ಣೆ ಕೊಡ್ತೀವಿ ಎಂದಿದ್ದರು. ಅದೇ ಕಾರಣಕ್ಕೆ ಈ ಅಡಚಣೆಯಾಗಿದೆಯೇ ಎಂದು ತಿಳಿದುಬಂದಿಲ್ಲ.