ತಮ್ಮ ಬೇಡಿಕೆಯನ್ನು ಪೂರೈಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಆಫ್ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುಬೇಕೆಂದು, ನ.20ರಿಂದ AITUC ಜಯಮ್ಮ ನೇತೃತ್ವದಲ್ಲಿ ಫ್ರೀಡಂಪಾರ್ಕ್ನಲ್ಲಿ ಅನಿರ್ಧಷ್ಟಾವಧಿವರೆಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಒಟ್ಟು 2877 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 430 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಮತ್ತು 1198 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಕಳೆದ 3-4 ವರ್ಷದಿಂದ ನೌಕರರನ್ನ ನೇಮಕ ಮಾಡಿಲ್ಲ. ಮಾರ್ಚ್ 5 ರಂದು ಭೌತಿಕ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಸಾಕಷ್ಟು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ 8 ತಿಂಗಳು ಕಳೆದರು ಇಲಾಖೆಯ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಅಂಗನವಾಡಿಯಲ್ಲಿ ಸಾಕಷ್ಟು ಕೆಲಸ ಪ್ರತಿನಿತ್ಯ ಇರುವುದರಿಂದ ಒಬ್ಬರ ಕೈಯಲ್ಲಿ ನಿಭಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಿದ್ದಾರೆ.