ಕೊಕ್ಕೆ ಚಾಕು ಹಿಡಿದು ವೃದ್ಧರೇ ಇರುವ ಮನೆಗಳಿಗೆ ಲಗ್ಗೆ ಇಡುವ ಮುಸುಕುಧಾರಿ ವ್ಯಕ್ತಿಯ ಬಗ್ಗೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಆತಂಕ ಮೂಡಿದೆ.
ಕಳೆದ ಒಂದು ವರ್ಷದಲ್ಲಿ ಗ್ರಾಮದ ನಾಲ್ಕು ಮನೆಗಳಿಗೆ ನುಗ್ಗಿರುವ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮರೆಯಾಗುತ್ತಿದ್ದಾನೆ.
ಕಳೆದ ಡಿ.28 ರಂದು ನಾಲ್ಕೇರಿ ಗ್ರಾಮದಲ್ಲಿ ಕೊಕ್ಕೆ ಚಾಕು ವ್ಯಕ್ತಿಯಿಂದ ದಾಳಿಗೊಳಗಾದ ಬೆಳೆಗಾರ ಸುಳ್ಳಿಮಾಡ ಪಿ.ತಿಮ್ಮಯ್ಯ ಅವರ ಪುತ್ರ ಸುಳ್ಳಿಮಾಡ ಟಿ.ಪೊನ್ನಪ್ಪ ಅವರು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ ಸೋಮವಾರ ದೂರು ಸಲ್ಲಿಸಿದರು.
ಕುಟ್ಟ ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ, ಇದೇ ಕಾರಣಕ್ಕೆ ಅಪರಿಚಿತ ವ್ಯಕ್ತಿಯ ದಾಳಿ ನಿರಂತರವಾಗಿದೆ ಎಂದು ಪೊನ್ನಪ್ಪ ಆರೋಪಿಸಿದರು.
ನಾಲ್ಕೇರಿ ಗ್ರಾಮ ವ್ಯಾಪ್ತಿಯಲ್ಲಿ ವೃದ್ಧರೇ ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಈ ವ್ಯಕ್ತಿ ದಾಳಿ ಮಾಡುತ್ತಿದ್ದು, ಆತಂಕ ಎದುರಾಗಿದೆ. ನನ್ನ ತಂದೆ ತಿಮ್ಮಯ್ಯ ಹಾಗೂ ತಾಯಿ ಪಾರ್ವತಿ ಅವರು ಮನೆಯಲ್ಲಿದ್ದಾಗ ಡಿ.28 ರಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ದಿಢೀರ್ ಆಗಿ ಪ್ರವೇಶ ಮಾಡಿದ್ದಾನೆ. ತಾಯಿಗೆ ಕೊಕ್ಕೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಕೋಣೆಯಲ್ಲಿದ್ದ ತಂದೆ ಬಂದು ಗದರಿದಾಗ ಇಬ್ಬರನ್ನೂ ಬೀಳಿಸಿ ಚಾಕುವಿನಿಂದ ದಾಳಿ ಮಾಡಿದ್ದಾನೆ. ಇದರಿಂದ ತಂದೆ ತೀವ್ರವಾಗಿ ಗಾಯಗೊಂಡಿದ್ದು, ತಾಯಿ ಜೋರಾಗಿ ಕಿರುಚಿಕೊಂಡಾಗ ಅಪರಿಚಿತ ವ್ಯಕ್ತಿ ಕಾಲ್ಕಿತ್ತಿದ್ದಾನೆ. “ದುಡ್ಡು, ದುಡ್ಡು”, ರಕ್ತ ಎನ್ನುವ ಪದಗಳನ್ನು ಮಾತ್ರ ಈತ ಬಳಸಿದ್ದಾನೆ. ಮನೆಯಲ್ಲಿ ನಾಲ್ಕು ಶ್ವಾನಗಳಿದ್ದು, ಅಪರಿಚಿತ ವ್ಯಕ್ತಿ ಬಂದರೂ ಬೊಗಳದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕಳ್ಳತನಕ್ಕಾಗಿ ವಯೋವೃದ್ಧರು ಇರುವ ಮನೆಗಳನ್ನೇ ಹುಡುಕಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ದಾಳಿ ಮಾಡುತ್ತಿರುವ ಬಗ್ಗೆ ಸಂಶಯವಿದೆ ಎಂದು ಪೊನ್ನಪ್ಪ ತಿಳಿಸಿದರು.
ಈ ಹಿಂದೆ ಇದೇ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಘಟನೆಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಯನ್ನು ಬಂಧಿಸಿದ್ದರೆ ಪ್ರಕರಣ ಪುನರಾವರ್ತನೆಯಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು.
ತೇಲಪಂಡ ಶಿವಕುಮಾರ್ ನಾಣಯ್ಯ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚೋರನ ಬಂಧನಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಗೃಹ ಸಚಿವರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಪರಿಚಿತ ವ್ಯಕ್ತಿಯ ದಾಳಿಯ ಬಗ್ಗೆ ನಾಲ್ಕೇರಿ ವ್ಯಾಪ್ತಿಯಲ್ಲಿ ಆತಂಕ ಮೂಡಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬರಲು ಭಯ ಪಡುವ ಪರಿಸ್ಥಿತಿ ಇದೆ. ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ದುಷ್ಕರ್ಮಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಶಾಸಕರುಗಳ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ ಎಂದರು.
ಗ್ರಾಮದ ಪ್ರಮುಖರು ಹಾಗೂ ಬೆಳೆಗಾರರಾದ ಅಲ್ಲುಮಾಡ ಅನಿಲ್ ಉತ್ತಪ್ಪ ಈ ಸಂದರ್ಭ ಹಾಜರಿದ್ದರು.