Publish Date: Thu, 23 Feb 2023 (07:53 IST)
Updated Date: Thu, 23 Feb 2023 (08:57 IST)
ಬಳ್ಳಾರಿ : ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಗಣಿನಾಡು ಬಳ್ಳಾರಿಗೆ ಆಗಮಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್ಆರ್ಎಸ್ ಶಾಲಾ ಮೈದಾನದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆ ಆಯೋಜನೆಗೊಂಡಿದ್ದು, ಕಾರ್ಯಕ್ರಮದ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ.
ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇತಿಹಾಸದಲ್ಲಿ ಈವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ರಾಮುಲು ಅವರ ಹೆಸರನ್ನು ಅಮಿತ್ ಶಾ ಇಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆಯಿದೆ. ಇದಕ್ಕಾಗಿ ಎಸ್ಆರ್ಎಸ್ ಗ್ರೌಂಡ್ನಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.