Publish Date: Mon, 02 Sep 2024 (14:27 IST)
Updated Date: Mon, 02 Sep 2024 (14:29 IST)
ಬೆಂಗಳೂರು: ಕೆಐಎಡಿಬಿಯಿಂದ ಸಿದ್ದಾರ್ಥ ಟ್ರಸ್ಟ್ಗೆ ಪ್ರಭಾವ ಬಳಸಿ ಸಿಎ ನಿವೇಶನವನ್ನು ಮಂಜೂರು ಮಾಡಿದ್ದಾರೆ ಎಂದು ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ನಿಯಮ ಉಲ್ಲಂಘನೆಯ ಜೊತೆಗೆ ತರಾತುರಿಯಲ್ಲಿ ಕೆಐಎಡಿಬಿಯಿಂದ ಐದು ಎಕರೆ ಸಿ.ಎ ನಿವೇಶನ ಮಂಜೂರು ಮಾಡಲಾಗಿದೆ. ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದುಕೊಂಡು ಹೀಗೆ ಸರ್ಕಾರಿ ಸೌಲಭ್ಯ ಪಡೆದಿದ್ದು ಸರಿಯೇ ಎಂದು ದೂರಿನಲ್ಲಿ ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್ದು ಒಂದು ಸಂವಿಧಾನ, ಕಾಂಗ್ರೆಸ್ಗೊಂದು ಸಂವಿಧಾನ. ನಮ್ಮ ವಿಚಾರದಲ್ಲಿ ಬಿಜೆಪಿ ಮೊದಲು 10 ಆರೋಪ ಮಾಡುತ್ತಿತ್ತು. ಎರಡನೇ ದಿನ ಐದು ಆರೋಪಗಳನ್ನು ಮಾಡಿದ್ದರು, ಈಗ ಸುಮ್ಮನಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬಿಟ್ಟು ಬೇರೆ ಯಾರೂ ಏಕೆ ಮಾತನಾಡುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ದಲಿತರ ಜೊತೆ ಬಡಿದಾಡಿಸುವುದು ಕೋಮುವಾದ ಸೃಷ್ಟಿಸುವುದು, ಇದೆಲ್ಲ ಆರ್ಎಸ್ಎಸ್, ಬಿಜೆಪಿ ಸಂಚು ಎಂದು ವಾಗ್ದಾಳಿ ನಡೆಸಿದ ಅವರು, ಬಿವೈ ವಿಜಯೇಂದ್ರ, ಆರ್.ಅಶೋಕ್ ಅವರು ನನ್ನ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.