ರಾಜ್ಯ ಸರ್ಕಾರದಿಂದ ಜಿಲ್ಲಾ ಮತ್ತು ತಾಲೂಕುಮಟ್ಟದ ಪತ್ರಿಕೆಗಳನ್ನು ಉಳಿಸಲು ಅಗತ್ಯವಿರುವ ಎಲ್ಲ ರೀತಿಯ ಉಪಕ್ರಮಗಳನ್ನು ಮುಂಗಡಪತ್ರದಲ್ಲಿ ಜಾರಿಗೆತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಅವರು ಮಂಗಳವಾರ ಕರ್ನಾಟಕ ಕಾರ್ಯನಿರತ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಸಣ್ಣಪತ್ರಿಕೆಗಳಿಗೆ ನೀಡಲಾಗುತ್ತಿರುವ ಜಾಹಿರಾತಿನಲ್ಲಿ ಆಗುತ್ತಿರುವ ತಾರತಮ್ಯ ನಿವಾರಣೆ ಮಾಡಲಾಗುವುದು. ಸರ್ಕಾರ ಈಗಾಗಲೇ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಿದ್ದು ಇದನ್ನು ಗ್ರಾಮೀಣ ಪತ್ರಕರ್ತರಿಗೂ ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ಇಂದುಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದಿಂದ ಮೌಲ್ಯ ಮರೆಯಾಗಿ ಬರೇ ಲಾಭ ನಷ್ಡದ ಲೆಕ್ಕ ಉಳಿದಿದೆ. ಈ ಸಂಕಷ್ಟಮಯ ಸ್ಥಿತಿಯಲ್ಲಿ ಸರ್ಕಾರ ಪತ್ರಿಕಾ ರಂಗದ ಜೊತೆ ಇರಲಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಆಗಿ ಪತ್ರಕರ್ತರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದ ಸಿಎಂ, ಕೊರೋನಾ ವೇಳೆ ಮೃತಪಟ್ಟ ಪತ್ರಕರ್ತರಿಗೆ ಬಾಕಿ ಇರುವ ಪರಿಹಾರ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು.
ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ದಿವ್ಯ ಸಾನಿಧ್ಯವಹಿಸಿದ್ದರು. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ ಆರ್. ನಿರಾಣಿ ಅವರು ಛಾಯಾಚಿತ್ರ ಪ್ರದರ್ಶನವನ್ನು, ಜೇವರ್ಗಿ ಶಾಸಕರು ಹಾಗೂ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯಸಿಂಗ್ ಅವರು ವಸ್ತು ಪ್ರದರ್ಶನ ಹಾಗೂ ಕಲಬುರಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ ಅವರು ವ್ಯಂಗಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
ಸಂಪಾದಕ ಹರಿಪ್ರಕಾಶ ಕೋಣೆಮನೆ ಮೊದಲು ಮಾತು ಆಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕ ಕೆ.ಎನ್. ಚೆನ್ನೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಕೆಯುಡಬ್ಲ್ಯೂಜೆ ಕ್ಯಾಲೆಂಡರ್ (2022)ನ್ನು ಬಿಡುಗಡೆ ಮಾಡಿದರು.
ಕೇಂದ್ರ ಮಂತ್ರಿ ಭಗವಂತ ಖೂಬಾ, ಶಾಸಕರುಗಳಾದ ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಬಿ.ಜಿ.ಪಾಟೀಲ, ಡಾ. ಶಶೀಲ ಜಿ. ನಮೋಶಿ ಚಿತ್ರನಟಿ ತಾರಾ , ವಾರ್ತಾ ಇಲಾಖೆ ನಿರ್ದೇಶಕ ಹರ್ಷ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಶ ಶಶಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ವಿತರಿಸಲಾಯಿತು.