ಬಿ. ಡಿ. ಎ. ಬ್ರೋಕರ್ ಗಳಿಗೆ ಎ. ಸಿ. ಬಿ. ಶಾಕ್
ಬೆಂಗಳೂರು , ಮಂಗಳವಾರ, 22 ಮಾರ್ಚ್ 2022 (14:48 IST)
ಬೆಳ್ಳಂಬೆಳಗ್ಗೆ ಬೆಂಗಳೂರಿನ 9 ಕಡೆ ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದ ಮೇಲೆ 9 ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ಬಿಡಿಎ ಭ್ರಷ್ಟಾಚಾರದ ಮೂಲವೇ ಈ ಮಧ್ಯವರ್ತಿಗಳು. ಬಿಡಿಎಗೆ ಬರುವ ಪ್ರತಿಯೊಬ್ಬ ಅಧಿಕಾರಿಯನ್ನು ಮಧ್ಯವರ್ತಿಗಳು ಸಂಪರ್ಕಿಸುತ್ತಿದ್ದರು. ನಿವೇಶನ ಹಂಚಿಕೆ, ಸರ್ಕಾರಿ ನಿವೇಶನ ಅಭಿವೃದ್ದಿ ಸೇರಿ ಬಿಡಿಎನ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಮಧ್ಯವರ್ತಿಗಳ ಒಡನಾಟ ಪತ್ತೆಯಾಗಿದ್ದು, ಇದೆ ಹಿನ್ನೆಲೆಯಲ್ಲಿ ಬಿಡಿಎ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ಮಾಡಿದೆ.
ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಐಷಾರಮಿ ಸನ್ ಗ್ಲಾಸಸ್ ಹಾಗೂ ವಾಚ್ಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್ನ ಸನ್ ಗ್ಲಾಸಸ್ ಹಾಗೂ ಕೈ ಗಡಿಯಾರಗಳು ಪತ್ತೆಯಾಗಿವೆ. ಚಿನ್ನಾಭರಣಗಳು ಸಹ ಎಸಿಬಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಮುಂದಿನ ಸುದ್ದಿ