ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿರುವುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದು, 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರು ಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು. ಯುಪಿ ಮಾದರಿ ಎಂದರೆ ಇದೇನಾ?' ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ ಸಂಘ ಪರಿವಾರದ ಕೈಗೊಂಬೆಯಾಗಿದೆ. ಬಿಜೆಪಿ ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.