ಬೆಂಗಳೂರು: ಚಿಂದಿ ಆಯುವವರ ನಡುವೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದ್ದ ಪ್ರಕರಣವನ್ನು ಬೊಮ್ಮನಹಳ್ಳಿ ಠಾಣಾ ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ದೀಪಕ್, ಹೇಮಂತ್ ಗೋಪ್, ಮಾದೇಶ್ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸೆ.13ರಂದು ಬೊಮ್ಮನಹಳ್ಳಿಯ 1ನೇ ಕ್ರಾಸ್ನಲ್ಲಿ 20 ರೂ. ವಿಚಾರಕ್ಕೆ ಚಿಂದಿ ಆಯುವವರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ದೀಪಕ್, ಹೇಮಂತ್ ಗೋಪ್, ಮಾದೇಶ್ ಎಂಬುವರು ಸಂಜಯ್ ಅಲಿಯಾಸ್ ನೇಪಾಳಿ (30) ಎಂಬಾತನನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ.
ಆರೋಪಿಗಳು ಸಿಗುವವರೆಗೂ ಸತ್ತವನ ಮಾಹಿತಿಯಾಗಲೀ, ಕೊಲೆ ಮಾಡಿದವರ ಮಾಹಿತಿಯಾಗಲೀ ಸಿಕ್ಕಿರಲಿಲ್ಲ. ವೈನ್ ಶಾಪ್ ಕ್ಯಾಶಿಯರ್ ಕೊಟ್ಟ ಒಂದು ಸುಳಿವಿನಿಂದಾಗಿ ಪೊಲೀಸರು ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಘಟನೆಯ ದಿನ ಸಂಜಯ್ ಹಾಗೂ ಆರೋಪಿ ದೀಪಕ್ ಒಂದೇ ವೈನ್ ಶಾಪ್ನಲ್ಲಿ ಮದ್ಯ ಖರೀದಿಸಿದ್ದರು. ವೈನ್ ಶಾಪ್ನ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.
ನಗರದ ವಿವಿಧ ಭಾಗಗಳಲ್ಲಿ ಚಿಂದಿ ಆಯುವವರನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದರು. ತನಿಖೆ ವೇಳೆ ದೀಪಕ್, ತಾನೇ ತನ್ನ ಸಹಚರರೊಂದಿಗೆ ಸೇರಿ ಸಂಜಯ್ನನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.