ಚಾಮರಾಜನಗರ: ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿದ್ಯಾರ್ಥಿನಿಯರ ಕಾಲೇಜು ವಸತಿ ನಿಲಯದ ಕಟ್ಟಡದಿಂದ ವಿದ್ಯಾರ್ಥಿಯೊಬ್ಬ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಣಿತ್(17) ಎಂದು ಗುರುತಿಸಲಾಗಿದೆ.
ಎರಡನೇ ಮಹಡಿಯ ಕಿಟಕಿ ಬಳಿಯಿಂದ ಮಧ್ಯರಾತ್ರಿ 2 ಗಂಟೆ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಣಿತ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಟ್ಟಡದಿಂದ ಬಿದ್ದಿದ್ದ ಮಣಿತ್‌ನನ್ನು ಬೆಳಗ್ಗೆ 8ಗಂಟೆಗೆ ಸಹ ವಿದ್ಯಾರ್ಥಿಗಳು ಗಮನಿಸಿ ವಸತಿ ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಗಾಯಗೊಂಡು ನರಳುತ್ತಿದ್ದ ಮಣಿತ್ ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದೇ ಆವರಣದಲ್ಲಿ ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಪದವಿ ಪೂರ್ವ ಕಾಲೇಜಿನ ಪ್ರತ್ಯೇಕ ವಸತಿ ನಿಲಯಗಳಿವೆ. ಇದೀಗ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಮಣಿತ್ ಯಾಕೆ ಹೋಗಿದ್ದು ಎಂಬುದರ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಮಧ್ಯರಾತ್ರಿಯಲ್ಲಿ ಮಣಿತ್‌ಗೆ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಕೆಲಸವೇನಿತ್ತು..? ಮಧ್ಯರಾತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದು ಹೇಗೆ?