Select Your Language

Notifications

webdunia
webdunia
webdunia
webdunia

ಪಾಸಾಗಿದ್ರೂ ಪಿಯು ಫಲಿತಾಂಶ ತಿರಸ್ಕರಿಸಿದ 878 ವಿದ್ಯಾರ್ಥಿಗಳು!

ಪಾಸಾಗಿದ್ರೂ ಪಿಯು ಫಲಿತಾಂಶ ತಿರಸ್ಕರಿಸಿದ 878 ವಿದ್ಯಾರ್ಥಿಗಳು!
ಬೆಂಗಳೂರು , ಮಂಗಳವಾರ, 3 ಆಗಸ್ಟ್ 2021 (08:25 IST)
ಬೆಂಗಳೂರು(.03): ಕೊರೋನಾದಿಂದಾಗಿ ವಾರ್ಷಿಕ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಉತ್ತೀರ್ಣಗೊಳಿಸಿದ್ದರೂ ರಾಜ್ಯಾದ್ಯಂತ 878 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ನಿರೀಕ್ಷೆಯಷ್ಟುಅಂಕ ಬಂದಿಲ್ಲ, ಪರೀಕ್ಷೆ ಬರೆದರೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇಲಾಖೆ ಪ್ರಕಟಿಸಿತ್ತು. 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದೆ ಎಂದೂ ಸ್ಪಷ್ಟಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 878 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ ಆ.19ರಂದು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.
ಕೊರೋನಾದಿಂದಾಗಿ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ತೀವ್ರವಾಗಿದ್ದರಿಂದ ಪರೀಕ್ಷೆ ನಡೆಸಿದರೆ ಸೋಂಕು ಹರಡಬಹುದು ಎಂಬ ಆತಂಕವನ್ನು ಪೋಷಕರು, ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದರು. ಪರೀಕ್ಷೆ ನಡೆಸಬೇಕು ಎಂದು ಕೆಲವರು ವಾದಿಸಿದರೆ, ಪರೀಕ್ಷೆ ಬೇಡವೇ ಬೇಡ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು. ಕೊನೆಗೆ ಪರೀಕ್ಷೆ ನಡೆಸದಿರುವ ತೀರ್ಮಾನವನ್ನು ಶಿಕ್ಷಣ ಇಲಾಖೆ ಕೈಗೊಂಡಿತ್ತು.
ಬಳ್ಳಾರಿ ಕಾಲೇಜಿನ 104 ವಿದ್ಯಾರ್ಥಿಗಳು:
ಫಲಿತಾಂಶ ತಿರಸ್ಕರಿಸಿದವರಲ್ಲಿ ಒಂದೇ ಕಾಲೇಜಿನ 104 ವಿದ್ಯಾರ್ಥಿಗಳಿರುವುದು ವಿಶೇಷವಾಗಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ 220ಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ಇದರಲ್ಲಿ ವಿಜಯನಗರದ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜೊಂದರಲ್ಲೇ 104 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದು ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾರೆ.
95% ಅಂಕ ಬಂದಿದ್ದರೂ
ಫಲಿತಾಂಶ ತಿರಸ್ಕಾರ!
‘ಪ್ರತಿ ವರ್ಷ ನಮ್ಮ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಬರುತ್ತಿದ್ದರು. ಕಲಾ ವಿಭಾಗದ ವಿದ್ಯಾರ್ಥಿಗಳು ರಾರಯಂಕ್ ಪಡೆಯುತ್ತಿದ್ದರು. ಕಳೆದ 6 ವರ್ಷದಿಂದ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ನಾವೇ ಮೊದಲ ಸ್ಥಾನದಲ್ಲಿ ಇರುತ್ತಿದ್ದೆವು. ಆದರೆ ಈ ಬಾರಿ ಕೇವಲ 6 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ. ಅಂಕಗಳು ಕಡಿಮೆ ಬಂದಿರುವ ಹಿನ್ನೆಲೆಯಲ್ಲಿ 104 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದು ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ’ ಎಂದು ವಿಜಯನಗರ ಜಿಲ್ಲೆ ಕೊಟ್ಟೂರಿನ ಇಂದು ಅನುದಾನರಹಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ವೀರಭದ್ರಪ್ಪ ಸ್ಪಷ್ಟಪಡಿಸಿದರು.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಪಿಯು ಬೋರ್ಡ್ ನೀಡಿದ ಅಂಕಗಳಿಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಪರೀಕ್ಷೆ ಬರೆದರೆ ಇನ್ನೂ ಹೆಚ್ಚು ಅಂಕ ಪಡೆಯಬಹುದು ಎನ್ನುತ್ತಿದ್ದಾರೆ. ಶೇ.95ರಷ್ಟುಅಂಕ ಪಡೆದಿರುವ ವಿದ್ಯಾರ್ಥಿಗಳೂ ಫಲಿತಾಂಶ ತಿರಸ್ಕರಿಸಿದ್ದು ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಬೇರೆ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರ್ಪಡೆಯಾದರೆ ವರ್ಷದಲ್ಲೇ ಅಭ್ಯಾಸದಲ್ಲಿ ಸುಧಾರಿಸುತ್ತಾರೆ. ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಸಾಧನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ ಎಂದು ವಿಶ್ಲೇಷಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲ ಆಗುತ್ತಾರಾ ಜಗದೀಶ್ ಶೆಟ್ಟರ್..?