Select Your Language

Notifications

webdunia
webdunia
webdunia
webdunia

ಸಚಿವ ಎಂ.ಬಿ.ಪಾಟೀಲರಿಗೆ ಒಂದೇ ವಿಳಾಸದಲ್ಲಿ ಬೇರೆ ಬೇರೆ ಹೆಸರಿನಲ್ಲಿ 5-6 ಸೈಟ್

Chalavadi NarayanaSwamy

Sampriya

ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2024 (20:15 IST)
ಬೆಂಗಳೂರು: 5 ಎಕರೆ, 10 ಎಕರೆ ಸಿ.ಎ. ಸೈಟ್‍ಗಳನ್ನು ಕೊಟ್ಟು ಇನ್ನೊಂದು ಆಯಾಮದಲ್ಲಿ ಕೆಲವರನ್ನು ತೃಪ್ತಿ ಪಡಿಸುವ ಮತ್ತು ಜೇಬು ತುಂಬಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಈ ಲೂಟಿ ಗಮನಕ್ಕೆ ಬಂದ ಮೇಲೂ ನಾವು ಸುಮ್ಮನಿರಬೇಕೇ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದೇ ಕಾರಣದಿಂದ ಘನತೆವೆತ್ತ ರಾಜ್ಯಪಾಲರನ್ನು ಭೇಟಿ ಮಾಡಿ ಸಿ.ಎ.ಸೈಟ್‍ಗಳ ಅಕ್ರಮದ ಕುರಿತು ತನಿಖೆಗೆ ಕೋರಿದ್ದೇವೆ. ಇದರಲ್ಲಿ ಒಬ್ಬರ ವಿಷಯ ಎಂದು ಹೇಳಿಲ್ಲ. ಆದರೂ ಸಚಿವರು ಕುಪಿತರಾಗಿದ್ದಾರೆ. ಅವರೇನು ಸೈಟ್ ತಗೊಂಡಿಲ್ವ? ಶೆಡ್ ಕಟ್ಟಿದ್ದಾರೆ. ಶೆಡ್ ನಾರಾಯಣಸ್ವಾಮಿ ಎಂದಿದ್ದಾರೆ. ನಾನು ತಗೊಂಡಿದ್ದೇ ಶೆಡ್ ಕಟ್ಟಲೆಂದು ಅಲ್ಲವೇ? ವೇರ್ ಹೌಸ್ ಎಂದರೆ ಶೆಡ್ ಅಲ್ಲವೇ ಎಂದು ಕೇಳಿದರು.

ಹೈದರಾಬಾದ್‍ನವರಿಗೆ 10 ಎಕರೆ ಜಾಗವನ್ನು ಬೆಂಗಳೂರಿನಲ್ಲಿ ಕೊಟ್ಟಿದ್ದಾರೆ. ಅವರಿಗೆ ಸಿ.ಎ. ಸೈಟ್ ಹೇಗೆ ಕೊಡಲು ಸಾಧ್ಯ? ಇಲ್ಲಿನ ಜನರಿಗೆ ಕೊಡಬೇಕಿತ್ತು. ದಲಿತ ಸಮುದಾಯಕ್ಕೆ ಸೇರಿದ 71 ಜನ ಹಣ ಕಟ್ಟಿ ನಾಲ್ಕೈದು ವರ್ಷಗಳಿಂದ ಸಿ.ಎ. ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಇನ್ನೂ 800 ಎಕರೆ ಬ್ಯಾಕ್‍ಲಾಗ್ ಇದ್ದರೂ ಕೊಡುತ್ತಿಲ್ಲ. 5-6 ವರ್ಷಗಳಿಂದ ಕೊಡದೆ ಇರುವವರು 337 ಎಕರೆಯನ್ನು ಸೈಟ್‍ಗಳಾಗಿ ಪರಿವರ್ತಿಸಿ 5 ಎಕರೆ, 10 ಎಕರೆ ಸಿ.ಎ. ಸೈಟ್ ಎಂದು ನಮೂದಿಸಿ ನೀಡಿದ್ದಾರೆ ಎಂದು ಆಕ್ಷೇಪಿಸಿದರು. ಸಿ.ಎ. ಸೈಟ್ ಎಂದರೆ ಸಾಮಾನ್ಯವಾಗಿ ಅರ್ಧ ಎಕರೆ, ಮುಕ್ಕಾಲು ಎಕರೆ, ಒಂದು ಎಕರೆ ಇರುತ್ತವೆ ಎಂದು ವಿವರಿಸಿದರು.

ತರಾತುರಿಯಲ್ಲಿ ತೀರ್ಮಾನ..
ನಾನು ಒಂದೇ ಸೈಟಿನ ಬಗ್ಗೆ ಮಾತನಾಡಿಲ್ಲ; 193 ಸೈಟ್‍ಗಳ ಕುರಿತು ಮಾತನಾಡಿದ್ದೇನೆ. ಅದರ ಕುರಿತಾಗಿ ತರಾತುರಿಯಲ್ಲಿ ಫೆ. 5ಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರೆ. ಫೆ.8ರಂದು ನೋಟಿಫಿಕೇಶನ್ ಹಾಕಿದ್ದಾರೆ. 23ರಂದು ಎಂದು ಹೇಳಿದರೂ ಅದಕ್ಕೂ ಮೊದಲೇ ಎಂದರೆ ಕೇವಲ 14- 15 ದಿನಗಳಲ್ಲಿ ಪ್ರಕ್ರಿಯೆ ಮುಗಿಸಿದ್ದಾರೆ. ಇದಾದ ಬಳಿಕ ಆರ್‍ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇದನ್ನು ಬೆಳಕಿಗೆ ತಂದರು. ಅದು ದೊಡ್ಡ ಸುದ್ದಿಯಾಯಿತು. ನಾನು ಪ್ರತಿಪಕ್ಷ ನಾಯಕನಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಸಚಿವರೊಬ್ಬರ ಹೆಸರು ಬಂದಿದೆ ಎಂದು ಹೇಳಿದ್ದು ನಿಜ. ದೂರನ್ನೂ ಕೊಟ್ಟಿದ್ದೇನೆ. ಸಚಿವ ಎಂ.ಬಿ.ಪಾಟೀಲ ಅವರು ಒಂದೇ ವಿಳಾಸದಲ್ಲಿ ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲೊನಿ ಎಂದು ನಮೂದಿಸಿ 5-6 ಸೈಟ್‍ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಪಡೆದಿದ್ದಾರೆ. ಒಂದೇ ಕುಟುಂಬದ ಸಚಿವರು ಇರುವ ಒಂದು ಟ್ರಸ್ಟಿಗೆ ಬೆಲೆಬಾಳುವ ಪ್ರದೇಶದ 5 ಎಕರೆ ಸೈಟನ್ನು ಏರೋಸ್ಪೇಸ್ ಉದ್ದೇಶಕ್ಕೆ ಕೊಟ್ಟಿದ್ದಾರೆ. ಅದಲ್ಲದೆ, ಎಂ.ಬಿ.ಪಾಟೀಲರ ಮಗ ಎಂಬ ಅನುಮಾನದ ವ್ಯಕ್ತಿಗೆ 302ನೇ ಡೆಫಡಿಲ್ ಅಪಾರ್ಟ್‍ಮೆಂಟ್‍ನಲ್ಲಿ 2 ಸೈಟ್ ಕೊಟ್ಟಿದ್ದಾರೆ. ಒಂದೇ ವಿಳಾಸ ಇದ್ದರೂ ಇಬ್ಬರಿಗೆ ನೀಡಿದ್ದಾರೆ. ಬೇರೆಯವರಿಗೆ ಸಣ್ಣಸಣ್ಣ ಸೈಟ್ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಎಲ್ಲವೂ ಬಿಜಾಪುರವೇ; ಬೇನಾಮಿ ಹೆಸರಿನಲ್ಲಿ ಪಡೆದಿದ್ದಾರೆ ಎಂದು ಆಕ್ಷೇಪಿಸಿದರು. ನಮಗೆ ಕಾಮನ್‍ಸೆನ್ಸ್ ಇಲ್ಲ ಎಂದು ಮಾನ್ಯ ಪ್ರಿಯಾಂಕ್ ಖರ್ಗೆಯವರು ಹೇಳಿದ್ದಾರೆ. 150 ಶಾಸಕರು ತಮ್ಮ ಅಹವಾಲಿನೊಂದಿಗೆ ಮಾನ್ಯ ರಾಜ್ಯಪಾಲರ ಬಳಿ ಹೋಗಿದ್ದರು. ಅವರು ವಾಪಸ್ ಬಂದ ಬಳಿಕ ಏನಾಗಿದೆ ಎಂದು ಹೇಳಿಲ್ಲ. ರಾಜ್ಯಪಾಲರು ಕೇಸುಗಳ ವಿಚಾರಣೆ ನಡೆಯುವ ಕುರಿತು ಹೇಳಿರುತ್ತಾರೆ. ಕಡತಗಳನ್ನು ಸಂಬಂಧಿತ ಇಲಾಖೆಗೆ ಕಳಿಸಿದ್ದಾರೆ. ಅಲ್ಲಿ ಅವರು ಪರಿಶೀಲಿಸಬೇಕು. ಇದರ ಬಗ್ಗೆ ಸಚಿವರಿಗೆ ಜ್ಞಾನವೇ ಇಲ್ಲ. ಫೈಲ್ ವಾಪಸ್ ಹೋದುದು ಅವರಿಗೆ ಗೊತ್ತೇ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಆಜಾನ್ ಕೇಳಿಸುತ್ತಿದ್ದ ಹಾಗೇ ಭಾಷಣ ನಿಲ್ಲಿಸಿದ ಸಿಎಂ ಸಿದ್ದರಾಮಯ್ಯ