ಕಳೆದ 2 ವಾರಗಳಿಂದ ಇಸ್ರೇಲ್, ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧ ಇನ್ನೂ ಮುಂದುವರೆದಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಏರ್‌ಸ್ಟ್ರೈಕ್ ಮಾಡುತ್ತಿದ್ರೆ, ಇಸ್ರೇಲ್ ಸೇನೆಯ ಯುದ್ಧ ಟ್ಯಾಂಕರ್‌ಗಳ ಮೇಲೂ ಉಗ್ರ ಸಂಘಟನೆಗಳು ದಾಳಿ ಮಾಡುತ್ತಿವೆ. ಈ ದಾಳಿ, ಪ್ರತಿದಾಳಿಯಿಂದಾಗಿ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಮಾಸ್ ವಿರುದ್ಧ ಯುದ್ಧದಲ್ಲಿ ಸಾವನ್ನಪ್ಪಿದರ ವಿವರವನ್ನು ಇಸ್ರೇಲ್ ಸೇನೆ ಪ್ರಕಟ ಮಾಡಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇದುವರೆಗೂ 4,651 ಮಂದಿ ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದಾರೆ. ಇಸ್ರೇಲ್ ದೇಶದ 1400 ಮಂದಿ ನಾಗರಿಕರು, 306 ಯೋಧರು ಬಲಿಯಾಗಿದ್ದಾರೆ. ಇಸ್ರೇಲ್ ದೇಶದ 203 ಮಂದಿ ಹಮಾಸ್ ಬಳಿ ಒತ್ತೆಯಾಳಾಗಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. ಗಾಜಾ ಅಲ್ ಅಹ್ಲಿ ಆಸ್ಪತ್ರೆ ಮೇಲೆ ನಡೆದಿರುವ ಭೀಕರ ವಾಯು ದಾಳಿಯಲ್ಲಿ ನಿನ್ನೆ 500 ಮಂದಿ ರೋಗಿಗಳು ಸಾವನ್ನಪ್ಪಿದ್ದರು. ಇಂದು ಇಸ್ರೇಲ್ ಏರ್‌ಸ್ಟ್ರೈಕ್‌ನಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ ಎಂದ ಗಾಜಾದ ವೈದ್ಯರು ಹೇಳಿದ್ದಾರೆ.