Publish Date: Thu, 24 Sep 2015 (13:07 IST)
Updated Date: Thu, 24 Sep 2015 (13:10 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇಂದು ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎರಡನೇ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇದರಲ್ಲಿ ಅಶ್ವಿನ್ ರಾವ್ ಮೊದಲ ಆರೋಪಿಯಾಗಿದ್ದಾನೆ.
ಹೌದು, ತನಿಖಾಧಿಕಾರಿ ಲಾಬೂರಾಮ್ ನೇತೃತ್ವದ ವಿಶೇಷ ತನಿಖಾ ತಂಡ ಈ ಎರಡನೇ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಚನ್ನಬಸಪ್ಪ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. 1610 ಪುಟಗಳ ಈ ತನಿಖಾ ವರದಿಯನ್ವಯ ಲೋಕಾಯುಕ್ತ ನ್ಯಾಯಾಮೂರ್ತಿ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ಪುತ್ರ ಪ್ರಥಮ ಆರೋಪಿಯಾಗಿದ್ದಾರೆ. ತಂದ ನಂತರದ ಸ್ಥಾನಗಳಲ್ಲಿ 420 ವೈ.ಭಾಸ್ಕರ್, ಅಶೋಕ್ ಕುಮಾರ್ ಮತ್ತು ಸೈಯ್ಯದ್ ರಿಯಾಜ್ ಅವರು ಆರೋಪಿಗಳಾಗಿದ್ದಾರೆ.
ಕ್ರೈಂ ನಂಬರ್ 58/2015ರ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ನು ಆರೋಪ ಪಟ್ಟಿ ಸಲ್ಲಿಸುವ ಜೊತೆಗೆ ಸಿಸಿಟಿವಿ ಹಾಗೂ ಟವರ್ ಲೊಕೇಶನ್ ದಾಖಲಾತಿ ಸೇರಿದಂತೆ ಇತರೆ 23 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಹಾವೇರಿ ಎಂಜಿನಿಯರ್ ಚನ್ನಬಸಪ್ಪ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯಯುಕ್ತ ಅಧಿಕಾರಿಗಳು, ತಾವು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಬಿ ರಿಪೋರ್ಟ್ ದಾಖಲಿಸುವುದಾಗಿ ಬೆದರಿಸಿ 20ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಂಜಿನಿಯರ್ ಚನ್ನಬಸಪ್ಪ ಅವರು ಎಸ್ಐಟಿಗೆ ದೂರು ಸಲ್ಲಿಸಿದ್ದರು. ಪರಿಣಾಮ ತನಿಖೆ ನಡೆಯುತ್ತಿದ್ದು, ಇಂದು ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಹಿಂದೆಯೂ ಕೂಡ ಮತ್ತೋರ್ವ ಎಂಜಿನಿಯರ್ ಕೃಷ್ಣಮೂರ್ತಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಶ್ವಿನ್ ರಾವ್ ವಿರುದ್ಧ ಮೊದಲ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಅದರಲ್ಲಿ ಅಶ್ವಿನ್ ಮೂರನೇ ಆರೋಪಿ ಎಂದು ತಿಳಿಸಲಾಗಿತ್ತು.