ಮಂಗಳೂರು: ವಕ್ಫ್ ಮಂಡಳಿಗೆ ಸೇರಿರುವ 29ಸಾವಿರ ಎಕರೆಗಳಷ್ಟು ಆಸ್ತಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿದ್ದಾರೆ. ನಾನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾಗಿದ್ದಾಗ ಸಲ್ಲಿಸಿದ್ದ ವರದಿಯ ಆಧಾರದಲ್ಲಿ, ತನಿಖೆ ನಡೆಸಿ, ಪ್ರಭಾವಿಗಳು ಕಬಳಿಕೆ ಮಾಡಿರುವ ಆಸ್ತಿಗಳನ್ನು ಮರಳಿ ವಶಕ್ಕೆ ಪಡೆದದ್ದೇ ಆದಲ್ಲಿ ರೈತರಿಗೆ ನೋಟಿಸ್ ನೀಡುವ ಪ್ರಮೇಯವೇ ಎದುರಾಗುವುದಿಲ್ಲ ಎಂದು ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದರು.
ಅವರು ಇಂದು ಆರ್ಯಸಮಾಜದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜೊತೆ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಕ್ಫ್ ಮಂಡಳಿಯ ನೋಂದಾಯಿತ ಅಸ್ತಿ 54 ಸಾವಿರ ಎಕರೆ ಇರುವಾಗ, ಇದೀಗ ರೈತರಿಗೆ ನೋಟಿಸ್ ನೀಡುವ ಅಗತ್ಯವೇನು. ನನ್ನ ವರದಿಯ ಆಧಾರದಲ್ಲಿ ಹಳೆಯ ಗಜೆಟ್ ಅಧಿಸೂಚನೆಗಳ ಆಧಾರದಲ್ಲಿ ತನಿಖೆ ನಡೆಸಿದ್ದಲ್ಲಿ ವಕ್ಫ್ ಮಂಡಳಿಯ ನಿಜವಾದ ಆಸ್ತಿ ಎಷ್ಟು? ಕಬಳಿಕೆ ಆಗಿದ್ದೆಷ್ಟು ಎಂಬ ಸ್ಪಷ್ಟ ಚಿತ್ರಣ ಸಿಗಗುತ್ತದೆ ಎಂದರು.
ರಾಜ್ಯದಲ್ಲಿ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ಆಸ್ತಿಯ ಪ್ರಮಾಣ 54 ಸಾವಿರ ಎಕರೆಗಳಷ್ಟಿದೆ. ಅದರಲ್ಲಿ ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿರುವ ಆಸ್ತಿಯ ಮೌಲ್ಯ 2012ರಲ್ಲಿ ₹ 2.30 ಲಕ್ಷ ಕೋಟಿಗಳಷ್ಟಿತ್ತು. ಈ ಜಮೀನುಗಳಲ್ಲಿ ಈಗಾಗಲೇ ಪ್ರಭಾವಿಗಳು, ರಾಜಕೀಯ ಮುಖಂಡರು ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನೆಲ್ಲ ನಿರ್ಮಿಸಿದ್ದಾರೆ. ಇದು ಸರಿಯಾದ ಮಾದರಿಯಲ್ಲಿ ತನಿಖೆ ಆದಲ್ಲಿ ಅನೇಕರು ಜೈಲು ಸೇರುತ್ತಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ನಿಜವಾಗಲು ಮುಸ್ಲಿಮರ ಪರ ಕಾಳಜಿ ಇದ್ದರೆ, ನಾನು ದಾಖಲೆ ಸಮೇತ ನೀಡಿರುವ ವರದಿಯನ್ನು ಆಧರಿಸಿ ಸಮಗ್ರ ತನಿಖೆ ನಡೆಸಲಿ ಎಂದು ಸವಾಲೆಸೆದರು.<>