ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಏಳು ವರ್ಷದ ಬಾಲಕಿ ಸೇರಿ ಗ್ರಾಮದ 17 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಇನ್ನು ಬಾಲಕಿಗೆ ತೀವ್ರ ಗಾಯಗಳಾದ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಹುಚ್ಚು ನಾಯಿಯ ಹಾವಳಿ ಜೋರಾಗಿದ್ದು, ನಾರಾಯಣಪುರ ಗ್ರಾಮದ ಜನರು ಮನೆಯಿಂದ ಹೊರಬರಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರಿಗೆ ಅಷ್ಟೇ ಅಲ್ಲದೇ ಹಸು ಎಮ್ಮೆಗಳಿಗೂ ಸಹ ಕಚ್ಚಿದೆ ಎನ್ನಲಾಗಿದೆ. ಹುಚ್ಚು ನಾಯಿ ದಾಳಿಗೆ ಸಿಲುಕಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.. ಕುತ್ತಿಗೆ ಹಾಗೂ ಬೆನ್ನು ಭಾಗವನ್ನ ಟಾರ್ಗೆಟ್ ಮಾಡಿ ಕಚ್ಚುತ್ತಿರುವುದರಿಂದ, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ನಾರಾಯಣಪುರ ಗ್ರಾಮ ಬಿಕೊ ಎನ್ನುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಗ್ರಾಮಸ್ಥರು, ಕೂಡಲೇ ಹುಚ್ಚು ನಾಯಿಯನ್ನ ಸೆರೆಹಿಡಿದು, ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.