ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 11.06 ಲಕ್ಷ ರೂ.ಗಳ ಲಾಭ ಗಳಿಸಿದೆ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 9066 ಸದಸ್ಯರಿದ್ದು, ಒಟ್ಟು ಪಾಲು ಹಣ 4,32,77,000ರಷ್ಟಾಗಿದೆ. ಸಂಘದ 56ನೇ ವಾರ್ಷಿಕ ಮಹಾಸಭೆ ಡಿ.20 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಅಭಿವೃದ್ಧಿ ಕಾರ್ಯಗಳು: ಪ್ರಸಕ್ತ ಕಾಫಿ ಕೃಪಾ ಕಟ್ಟಡಕ್ಕೆ ರೂ.9.50 ಲಕ್ಷ ವೆಚ್ಚದಲ್ಲಿ ಮೇಲ್ಛಾವಣಿ ಹಾಕಿಸಿದ್ದು, ಕಚೇರಿಯ ಎಲ್ಲಾ ವ್ಯವಹಾರಗಳನ್ನು ಗಣಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನಿವೃತ್ತಿ ಹೊಂದಿದ ನೌಕರರ ಬದಲಿ ನೇಮಕಾತಿ ಮಾಡದೇ ಇರುವುದರಿಂದ ಸಂಘದ ವ್ಯವಹಾರ ನಡೆಸಲು ಸಿಬ್ಬಂದಿ ಕೊರತೆ ಉಂಟಾಗಿದ್ದು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ಹೊಂದಿರುವ ಸಂಘ ಹೊಂದಿರುವ 10 ಸೆಂಟು ಖಾಲಿ ನಿವೇಶನದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದು, ಈ ಬಗ್ಗೆ ಮಹಾಸಭೆಯಲ್ಲಿ ಪ್ರಸ್ತಾಪಿಸಿ ಸದಸ್ಯರ ಅನುಮತಿ ಪಡೆದುಕೊಂಡು ಇಲಾಖಾನುಮತಿ ದೊರೆತ ನಂತರ ಕಾಮಗಾರಿಯನ್ನು ಕಾರ್ಯಗತಗೊಳಿಸಲು ಚಿಂತನೆ ಮಾಡಲಾಗಿದೆ.
ಹೆಬ್ಬಾಲೆ ಉದ್ದಿಮೆಯ ಪೆಟ್ರೋಲ್ ಬಂಕಿನ ಆವರಣದಲ್ಲಿ ರೂ.7.50 ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದ್ದು, ಹುಣಸೂರು ಉದ್ದಿಮೆಯಲ್ಲಿರುವ ಕಟ್ಟಡಗಳನ್ನು ಅವಶ್ಯ ದುರಸ್ತಿ ಕೆಲಸ ಮಾಡಿ ಹೆಚ್ಚುವರಿ ಆದಾಯ ಬರುವಂತೆ ಬಾಡಿಗೆಗೆ ನೀಡಲಾಗುವುದು. ಹುಣಸೂರು ಉದ್ದಿಮೆಯಲ್ಲಿ ಕಾಫಿ ಸಂಸ್ಕರಣಾ ವ್ಯವಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ತಾಕೇರಿ ಪೊನ್ನಪ್ಪ, ನಿರ್ದೇಶಕರಾದ ರಮೇಶ್ ಮುದ್ದಯ್ಯ, ಪಿ.ಸಿ.ಕಾವೇರಪ್ಪ, ಸುವಿನ್ ಗಣಪತಿ ಹಾಗೂ ಲೀಲಾ ಮೇದಪ್ಪ ಉಪಸ್ಥಿತರಿದ್ದರು.