Webdunia - Bharat's app for daily news and videos

Install App

'ಪ್ರೇಮ'ದ ಒಂದು ಬಾಟಲಿ ರಕ್ತ

Webdunia
ಹಂಝ ಮಲಾರ್

ಅದೊಂದು ಸೌಹಾರ್ದ ವೇದಿಕೆ ಎನ್ನಬಹುದು. ಹಾಗಿದೆ ಆ ಕೇರಿಯ ಮೂರು ಮನೆಗಳು. ಅವರೆಲ್ಲಾ ಅಲ್ಲಿ ಹುಟ್ಟಿ ಬೆಳೆದವರಲ್ಲ. ಒಂದೆರಡು ವರ್ಷದ ಹಿಂದೆ ಬೇರೆ ಬೇರೆ ಕಡೆಗಳಿಂದ ಬಂದು ನೆಲೆಸಿದವರು. ಆ ಕೇರಿಯ ರಸ್ತೆ ದಾಟುವಾಗ ಮೊದಲು ಸಿಗುವ ಮನೆ ಸುಲೈಮಾನ್ ಸಾಹೇಬರದ್ದು. ನಂತರ ಅಕ್ಷಯಕುಮಾರ್‌ರವರ ಮನೆ ಸಿಗುತ್ತದೆ. ಅವುಗಳಿಗೆ ಎದುರಾಗಿ ಫೆಡ್ರಿಕ್ ಡಿಸೋಜಾರದ್ದಿದೆ. ಸುಲೈಮಾನ್ ಸಾಹೇಬರು ಜಿನಸಿ ಅಂಗಡಿಯ ಬಾಗಿಲು ಮುಚ್ಚಿ ಸೋಫಾಕ್ಕೆ ಒರಗುವಷ್ಟರಲ್ಲಿ ಫೋನ್ ಗುಣುಗುಟ್ಟಿತು. ರಿಸೀವರ್ ಕೈಗೆತ್ತಿ ಹಲೋ ಎಂದಾಗ 'ನಿಮ್ಮ ಮಗ ಬಶೀರ್‌ಗೆ ಆಕ್ಸಿಡೆಂಟ್ ಆಗಿದೆ'. ಯುನಿಟಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆಬೇಗ ಬನ್ನಿ' ಎಂದಷ್ಟೇ ಆ ಕಡೆಯಿಂದ ಮಾತು ಕೇಳಿ ಬಂತು. ಸುಲೈಮಾನ್ ಸಾಹೇಬರು ಏದುಸಿರು ಬಿಡುತ್ತಾ 'ಹೇಗೆ? ಎಲ್ಲಿ?' ಎಂದು ಕೇಳುವ ಮುನ್ನವೇ ಅಜ್ಞಾತ ವ್ಯಕ್ತಿ ರಿಸೀವರ್ ಕೆಳಗಿಟ್ಟಿದ್ದರು.

ಅರ್ಧಗಂಟೆಯೊಳಗೆ ಸುಲೈಮಾನ್ ಸಾಹೇಬರು ಮತ್ತವರ ಮನೆಯವರು ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ನೋಡುವುದೇನು, ಬಶೀರ್‌ನ ಮೈ ಮೇಲೆಲ್ಲಾ ರಕ್ತದೋಕುಳಿಯಾಗಿದೆ. ತಲೆಗೆ ಬಿಳಿ ಬಟ್ಟೆ ಸುತ್ತಲಾಗಿದೆ. ಪ್ರಜ್ಞೆ ಕಳಕೊಂಡು ಅಂಗಾತ ಬಿದ್ದದ್ದಾನೆ. ನರ್ಸ್‌ಗಳು, ಡಾಕ್ಟರ್‌ಗಳು ಸುತ್ತುವರೆದಿದ್ದಾರೆ. ಅವರಿಗೆ ಮಾತೇ ಹೊರಡಲಿಲ್ಲ. ಮರುದಿನ ಬಶೀರ್‌ನ ಕಾಲೇಜು ಸಹಪಾಠಿಗಳೆಲ್ಲಾ ಆಗಮಿಸಿದ್ದರು. ಈಗ ಆತನಿಗೆ ಪ್ರಜ್ಞೆಬಂದಿದ್ದರೂ ಎರಡು ಶಸ್ತ್ರಕ್ರಿಯೆಗೊಳಗಾದ್ದರಿಂದ ಮಾತಾಡುವ ಸ್ಥಿತಿಯಲ್ಲಿರಲಿಲ್ಲ.

ಸುಲೈಮಾನ್ ಸಾಹೇಬರದ್ದು ಗಡಿಬಿಡಿಯ ಬದುಕು. ಅವರ ಜಿನಸಿ ಅಂಗಡಿ ತೆರೆಯದಿದ್ದರೆ ಊರಿನ ನಾಲ್ಕು ಮಂದಿ ಹಸಿವಿನಿಂದ ಬಳಲಿಯಾರು. ಹಾಗಾಗಿ ಅವರು ಹಗಲು ಹೊತ್ತು ಅಂಗಡಿ ತೆರೆದು, ರಾತ್ರಿ ವೇಳೆಗೆ ಆಸ್ಪತ್ರೆಗೆ ಹೊರಡುವ ತೀರ್ಮಾನ ಕೈಗೊಂಡಿದ್ದಾರೆ. ಅಂದು ರಾತ್ರಿ ಸಾಹೇಬರು ಆಸ್ಪತ್ರೆಗೆ ಹೊರಡುವ ತರಾತುರಿಯಲ್ಲಿದ್ದರು. ಮತ್ತೆ ಟೆಲಿಫೋನ್ ಗುಣುಗುಟ್ಟಿತು.'ಬಶೀರ್‌ನಿಗೆ ಕೂಡಲೇ ಎರಡು ಬಾಟಲಿ ರಕ್ತ ಬೇಕಂತೆ. ಇಲ್ಲೆಲ್ಲೂ ಸಿಗುತ್ತಿಲ್ಲ. ಕೂಡಲೇ ಎಲ್ಲಿಂದಾದರೂ ತರುವ ಏರ್ಪಾಟು ಮಾಡಿ. ಊರಲ್ಲಿನ ನಾಲ್ಕು ಯುವಕರನ್ನು ಕರೆತಂದರೂ ಆದೀತು' ಫೋನ್ ಕರೆ ಬಶೀರ್‌ನ ಗೆಳೆಯನದ್ದಾಗಿರಬಹುದೆಂದು ಸಾಹೇಬರು ಊಹಿಸಿದರು.

ಸುಲೈಮಾನ್ ಸಾಹೇಬರು ಕಂಗಾಲು ;ಈ ರಾತ್ರಿ ಸಹಾಯಕ್ಕಾಗಿ ಯಾರನ್ನು ಕರೆಯಲಿ? ಅಕ್ಷಯಕುಮಾರ್...!!ಓ... ಅವರಿಂದ ಬಾಟಲಿ ರಕ್ತ ಕೊಡಿ ಅಂತ ನಾ ಹೇಗೆ ಕೇಳಲಿ? ಅವರ ಮನದಲ್ಲಿ ಏನೇನೋ ಯೋಚನೆಗಳು ತುಂಬಿ ಹೋದವು. ಆ ಕೇರಿಯಲ್ಲಿ ಅಕ್ಷಯಕುಮಾರ್ ಮತ್ತು ಫೆಡ್ರಿಕ್ ಡಿಸೋಜಾರದ್ದು ಬಿಟ್ಟರೆ ಮತ್ತೆ ಬೇರೆ ಯಾವ ಮನೆಯೂ ಇಲ್ಲ. ಸುಲೈಮಾನ್ ಸಾಹೇಬರು ಅಕ್ಷಯಕುಮಾರ್‌ರ ಮನೆಯ ಕದ ತಟ್ಟಿದರು, ಏದುಸಿರು ಬಿಡುತ್ತಾ ವಿಷಯ ತಿಳಿಸಿದರು. ಅಕ್ಷಯಕುಮಾರ್‌ರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆದರೆ ನೆರೆಮನೆಯಾತ ಮನೆಗೆ ಬಂದು ಕರೆದಾಗ ಸುಮ್ಮನಿರಲಾಗುತ್ತದೆಯೇ? ಅವರು ಧೈರ್ಯ ತಂದು ಹೊರಡಲನುವಾದರು. ಅವರ ಜತೆ ಅವರ ಹೆಂಡತಿ ಮತ್ತು ಮಗಳೂ ಕೂಡಾ ಹೊರಟುಬಂದರು. ನೀಲಿ ಬಣ್ಣದ ಕಾರು ಹಳ್ಳಿಯ ಕೆಂಪು ರಸ್ತೆಯನ್ನು ತುಳಿದು ನಗರದತ್ತ ಓಡಿತು.

ಸುಲೈಮಾನ್ ಸಾಹೇಬರಿಗೆ ಎದೆಬಡಿತ ಶುರುವಾಗಿತ್ತು. ಆದರೂ ಧೈರ್ಯ ತಂದುಕೊಂಡರು.ಶಾಲಾ ಅಧ್ಯಾಪಕರಾದ ಅಕ್ಷಯಕುಮಾರ್ ಮಾನವೀಯ ನೆಲೆಯಲ್ಲಿ ತನ್ನ ರಕ್ತ ಪರೀಕ್ಷಿಸಿದರು. ಇಲ್ಲ! ಬಶೀರ್‌ಗೆ ಆ ರಕ್ತ ಹೊಂದಾಣಿಕೆಯಾಗುತ್ತಿಲ್ಲ. ಅವರು ತಣ್ಣಗೆ ನರಳಿದರು. ಹಾಗೇ ಹೆಂಡತಿಯ ಮುಖ ನೋಡಿದರು. ಗಂಡನ ಮುಖ ಛಾಯೆಯನ್ನರಿತ ಆಕೆ ರಕ್ತ ಪರೀಕ್ಷೆಗೆ ಮುಂದಾದಳು. ಇಲ್ಲ, ಅದೂ ಆಗುವುದಿಲ್ಲ. ಕೆಲವರಿಗೆ ಒಂದೆರಡು ಕಾಯಿಲೆಯಿದ್ದುದರಿಂದ ಸಾಹೇಬರಿಗೆ ಅವರ ರಕ್ತ ಬೇಡವಾಗಿತ್ತು. ಅವರಿಗೆ ಆತಂಕ ಹೆಚ್ಚುತ್ತಲೇ ಹೋಯಿತು. ಅವರು ಬೇರ ಮಾರ್ಗ ಕಂಡು ಹಿಡಿಯಲು ತುರ್ತಾಗಿ ನಡೆದರು. ಅಷ್ಟರಲ್ಲಿ ಅಕ್ಷಯಕುಮಾರ್‌ರ ಮಗಳು ಕು.ಪವಿತ್ರ ರಕ್ತ ಪರೀಕ್ಷಿಸಲು ಮುಂದಾದಳು. ಸಾಹೇಬರು ಅಕ್ಷಯಕುಮಾರ್‌ರ ದಂಪತಿಗಳ ಮುಖದತ್ತ ನೋಟ ಬೀರಿದರು.ಆ ಮುಖ ಒಪ್ಪಿಗೆಯ ಸೂಚನೆಯನ್ನು ನೀಡಿದಂತಿತ್ತು. ಅವರು ಕೂಡಲೇ ಅವಳ ರಕ್ತ ಪರೀಕ್ಷಸಿದರು. ಹೌದು! ಆ ರಕ್ತ ಬಶೀರ್‌ನ ದೇಹಕ್ಕೆ ಹೊಂದಾಣಿಕೆಯಾಗುತ್ತಿದೆ. ಇನ್ನೂ 18 ರ ಹರೆಯದ ಹುಡುಗಿ, ಮೈ ತುಂಬಿಕೊಳ್ಳುತ್ತಿದೆಯಷ್ಟೇ... ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಈಕೆ, ಈಪ್ರಾಯದಲ್ಲಿ ತನ್ನ ರಕ್ತದಾನ ಮಾಡಿದರೆ ಮುಂದೆ!? ಅಕ್ಷಯಕುಮಾರ್‌ರ ಹೆಂಡತಿಗೆ ಕೆಂಪು ಕೆಂಪಾದ ಆ ಒಂದು ರಕ್ತವನ್ನೇ ಕಣ್ಮುಂದೆ ಬಂದು ತಣ್ಣಗೆ ನಡುಗಿದರು. ಅರ್ಧ ಗಂಟೆ ಕಳೆಯಿತು. ಪವಿತ್ರ, ಬಶೀರ್‌ನಮುಖದತ್ತ ದೃಷ್ಟಿ ಹಾಯಿಸಿದಳು. ಉರುಟುರುಟಾದ ಸುಂದರ ಮುಖ. ಪುಟ್ಟ ಮೀಸೆ ದಪ್ಪಗೆ ಕಪ್ಪಾಗಿ ಬೆಳೆಯುತ್ತಿದೆ. ಅವಳು ಮತ್ತೊಮ್ಮೆ ಆ ಮುಖವನ್ನು ಕದ್ದು ನೋಡಿದಳು. ಮನ ಪುಳಕಿತಗೊಳ್ಳುತ್ತಿಂದ್ದತೆಯೇ ಅವಳ ದೇಹ ನಿತ್ರಾಣಕ್ಕೊಳಗಾದವು. ಫಲಾಹಾರ ತಿನ್ನುತ್ತಾ ಸಾವರಿಸಿಕೊಂಡಳು.

ಸಾಹೇಬರ ಮನೆಯವರೂ ಆಕೆಯನ್ನು ಆದರದಿಂದ ಸ್ವಾಗತಿಸುತ್ತಾರೆ. ಯಾಕೆಂದರೆ ತನ್ನ ಮಗನ ಪ್ರಾಣ ಉಳಿಸಿದ ಸ್ನೇಹಜೀವಿಯಾಕೆ. ಬಶೀರ್ ಕೂಡಾ ಅಷ್ಟೇ, ಆಕೆಯೊಂದಿಗೆ ಸಲಿಗೆಯೊಂದಿಗೆ ಮಾತಾಡುತ್ತಾನೆ. ಆಸೆಗಣ್ಣಿಂದ ನೋಡುತ್ತಾನೆ. ಮನಸ್ಸಿಗಾಗುವ ಹಿತವನ್ನು ಅರಿತುಕೊಳ್ಳುತ್ತಿದ್ದಾನೆ. ಅಲ್ಲದೆ ಅವನು ತನ್ನ ಜೀವ ಉಳಿಸಿದ ಆ ದಿನವನ್ನು ನೆನೆದು ಕೃತಜ್ಞತೆ ಸಲ್ಲಿಸುವಂತೆ ಜ್ಞಾಪಿಸುತ್ತಲೇ ಇದ್ದಾನೆ. ತದನಂತರ ಇಬ್ಬರೂ ತುಂಟ ನಗೆ ಚೆಲ್ಲಿ ಹಕ್ಕಿಯಂತೆ ಹಾರಾಡತೊಡಗಿದರು. ಬಶೀರ್ ದಿನನಿತ್ಯ ಸಂಜೆ ಪವಿತ್ರಾಳ ಕಾಲೇಜಿಗೆ ತೆರಳಿ ಮಾತುಕತೆ ನಡೆಸುತ್ತಾನೆ. ಅಲ್ಲದೆ ಒಂದು ಬಾಟಲಿ ರಕ್ತ ಒಂದು ಪ್ರೇಮ ಪತ್ರ ಬರೆಯುವವರೆಗೆ ಮುಂದುವರಿಯುತ್ತದೆ. ಪವಿತ್ರ ತನ್ನ ಮೊದಲ ಪ್ರೇಮ ಪತ್ರವನ್ನು ಬಹಳ ನಾಚಿ ಬರೆದಿದ್ದಳು. ಅಲ್ಲಿಂದ ಸುಮಾರು ಆರೇಳು ತಿಂಗಳವರೆಗೂ ಅವರ ಪ್ರೇಮದಾಟ ಮುಂದುವರಿಯುತ್ತಿತ್ತು.

ಫೆಡ್ರಿಕ್ ಡಿಸೋಜಾರ ಮಗಲು ಕು. ಜೆಸಿಂತಾ ಕೂಡಾ ಪವಿತ್ರಳ ಕ್ಲಾಸ್‌ಮೇಟ್. ಪವಿತ್ರಳನ್ನು ಭೇಟಿಯಾದಾಗಲೆಲ್ಲಾ ಬಶೀರ್ ಆಕೆಯೊಡನೆ ಕೂಡಾ ಮಾತುಕತೆ ನಡೆಸುತ್ತಾನೆ. ಯಾಕೆಂದರೆ ನೆರೆಕರೆಯ ಹುಡುಗಿ, ಜೊತೆಗೆ ತನ್ನ ಪ್ರಿಯತಮೆಯ ಕ್ಲಾಸ್‌ಮೇಟ್ ತಾನೇ. ಜೆಸಿಂತಾ, ಪವಿತ್ರಾಳಿಗಿಂತಲೂ ತುಂಬ ಸುಂದರಿ. ಆಕೆ ಬಶೀರ್‌ನನ್ನು ಆಗಿಂದಾಗ್ಗೆ ಕದ್ದು ನೋಡುವುದರಲ್ಲೇ ಸಂತೋಷಪಡುತ್ತಾಳೆ. ಆತನೂ ಅಷ್ಟೇ ಕದ್ದು ನೋಡುತ್ತಾನೆ. ಪ್ರೀತಿ ಪ್ರೇಮದ ಮರ್ಮ ಅರಿಯದೆ ಕಂಡದ್ದೆಲ್ಲಾ 'ಚಂದ' ಎಂದು ಬಾಯ್ತೆರೆಯುವ ಹದಿಹರೆಯ ತಾನೇ? ಆ ಹದಿಹರೆಯದ ದೋಷವೋ ಏನೋ, ದಿನಕಳೆದಂತೆ ಬಶೀರ್‌ನ ಮನಸ್ಸು ಜೆಸಿಂತಾಳ ಕಡೆಗೆ ವಾಲುತ್ತಿದೆ. ಹಾಗಾಗಿ ಪವಿತ್ರಾಳಲ್ಲಿ ಮಮತೆಯ ಮಾತಾಡುವುದನ್ನು ನಿಲ್ಲಿಸಿದ್ದಾನೆ. ಆಗ ಪ್ರತಿ ದಿನ ಬಶೀರ್ ಜೆಸಿಂತಾಳ ಜತೆ ಹರಟೆ ಹೊಡೆಯುತ್ತಾನೆ. ಜೆಸಿಂತಾಳ ಹುಚ್ಚು ಮನಸ್ಸು ಪವಿತ್ರಾಳ ಮನಕ್ಕೆ ತನಗರಿವಿಲ್ಲದಂತೆಯೇ ಅನ್ಯಾಯವೆಸಗುತ್ತಿದೆ. ಸೂರ್ಯ ಚಂದ್ರರ ದಿನದಾಟದ ನಡುವೆ ಬಶೀರ್ ತನ್ನಿಂದ ದೂರವಾಗುತ್ತಿದ್ದಾನೆಂಬ ಅರಿವು ಪವಿತ್ರಾಳಿಗಾಗುತ್ತಿದೆ.

ಬಶೀರ್‌ನ ಮನದಿಂಗಿತವನ್ನು ಅರಿಯಲು ಪ್ರಯತ್ನಿಸುತ್ತಲೇ ಸಹಿಸಿದಳು. ಆ ದಿನ ರಜೆ ಹಾಕಿ ಮರುದಿನ ಕಾಲೇಜಿಗೆ ಕಾಲೆಳೆದ ಪವಿತ್ರಾಳಿಗೆ ತನ್ನ ಗೆಳತಿಯರು ಉದುರಿಸಿದ ಆ ಮಾತು ಚುಚ್ಚ ತೊಡಗಿತು. ಆಕೆಯ ಮನ ಕೊರೆಯುತ್ತಲೇ ಆಕೆ ತನ್ನಲ್ಲೇ 'ಏನು ಬಶೀರ್ ಜೆಸಿಂತಾಳ ಜತೆ ಎರಡು ಪಿರಿಯಡ್‌ಗೂ ಹೆಚ್ಚು ಹೊತ್ತು ಕೂತು ಮಾತುಕತೆ ನಡೆಸಿದನೇ?' ಎಂದು ಪ್ರಶ್ನಿಸಿದಳು. ಸತತ ಎರಡು ದಿನಗಳ ಕಾಲ ಬಶೀರ್ ಪವಿತ್ರಳನ್ನು ಭೇಟಿಯಾಗಿಲ್ಲ. ತನಗಾದ ದುಃಖವನ್ನು ತಡೆದು ಉಮ್ಮಳಿಸುತ್ತಾ ಅಂದು ಸಂಜೆಯೇ ಆಕೆ ಮನೆಯಲ್ಲೇ ಅವನನ್ನು ಭೇಟಿಯಾದಳು. ಮನೆಯವರಿಂದ ಎಂದಿನ ಸ್ವಾಗತ ದೊರಕಿತ್ತಾದರೂ, ತನ್ನ ಪ್ರಿಯಕರನ ಸ್ವಾಗತ ದೊರಕಲಿಲ್ಲ. 'ಏನು?' ಎಂದು ಕೇಳುವ ಸೌಜನ್ಯವನ್ನೂ ಆತ ತೋರಲಿಲ್ಲ. ಆತ ನೋಡಿಯೂ ನೋಡದಂತೆ ಪುಸ್ತಕಕ್ಕೆ ಕಣ್ಣು ಹಾಯಿಸಿದ್ದ. ಪವಿತ್ರ ಆತನ ಬಳಿ ಹೋಗಿ ಕೂತಳು.

ಮುಖಯಾಚಿದಳು. ಇಲ್ಲ... ಉತ್ತರವಿಲ್ಲ!' ಯಾಕೆ ನಾ ಬರಬೇಕು. ನಿನಗೆ ಬೇರೆ.....''ಹ್ಞಾಂ .. ಬೇರೆ...' ಅವಳು ನರಳಿದಳು. ಆದರೆ ಬಶೀರ್ ಮತ್ತೆ ಮಾತೆತ್ತಲಿಲ್ಲ. ಪವಿತ್ರಾಳಿಗಾಗಿ ಜೀವ ಬಿಡುತ್ತಿದ್ದ ಆತ ಈಗ ಕಣ್ಣೆತ್ತಿಯೂ ನೋಡದೆ ಹೋದ.ಅವಳಿಗೆ ಕೋಪ ತಡೆಯಲಾಗಲಿಲ್ಲ. ಎದ್ದು ನಿಂತಳು. ಅವನನ್ನು ಇಡಿಯಾಗಿ ನುಂಗಬೇಕೆನಿಸಿತು."ಬಶೀರ್ ನನ್ನ ಮೇಲೆ ನಿನಗಿದ್ದ ಪ್ರೀತಿ ಎಲ್ಲಿ ಹೋಯಿತು?ಉಸಿರುಸಿರಿಗೂ ನೀ ನನ್ನ ಪೂಜಿಸುತ್ತಿದ್ದೆಯಲ್ಲಾ. ಈಗೆಲ್ಲಿದೆ ಈ ಪೂಜೆ, ಈ ಪ್ರೀತಿ? ನೀ ನನ್ನೊಡನೆ ಪ್ರೇಮದ ನಾಟಕವಾಡಿದೆಯಾ?ಹ್ಞೂಂ, ಅದಿರಲಿ, ಮಾತು ಮಾತಿಗೂ ನೀ ನನ್ನಲ್ಲಿ 'ಒಂದು ಬಾಟಲಿ ರಕ್ತಕೊಟ್ಟು ಪ್ರಾಣ ಉಳಿಸಿದಾಕೆ 'ಎಂದು ಆನಂದ ಭಾಷ್ಪವಾಗಿ ನಿನ್ನ ಗೆಳೆಯರಲ್ಲಿ ಹೇಳಿ ನನ್ನ ಪರಿಚಯಿಸುತ್ತಿದ್ದಿಯಲ್ಲ. ಈ ಮಾತುಗಳು ಈಗೆಲ್ಲಿ ಹೋಯಿತು?"- ಪವಿತ್ರ ಸಹನೆ ಕಳೆದುಕೊಂಡಳು."ಪವಿತ್ರಾ.. ಬಾಯಿಗೆ ಬಂದ ಹಾಗೆ ಮಾತಾಡಿ ನನ್ನ ತಲೆ ತಿನ್ನಬೇಡ. ನೀನು ನನಗೆ ರಕ್ತ ಕೊಟ್ಟಿದ್ದೇನೋ ನಿಜ? ಆದರೆ ಅದಕ್ಕೀಗ ನಿನಗೇನು ಬೇಕು ಹೇಳು?" ಬಶೀರ್ ಕಿರುಚಿದ. ಪವಿತ್ರಾ ಬಿಕ್ಕಿ ಬಿಕ್ಕಿ ಅತ್ತಳು. ನೋವು ತಾಳಲಾರದೆ ರೋಧಿಸಿದಳು.

ಸೀದಾ ತನ್ನ ಮನೆಗೆ ತೆರಳಿ ಆಕೆ ಹಾಸಿಗೆ ಹಿಡಿದಳು. ಗಡಿಯಾರದ ಮುಳ್ಳು ಎಂಟು ಗಂಟೆ ತೋರಿಸುತ್ತಿತ್ತು. ಕೈಗೆ ಪೆನ್ನೆತ್ತಿಕೊಂಡಳು. ಸುಮಾರು ಅರ್ಧ ಗಂಟೆಯವರೆಗೂ ಆಕೆ ಗೀಚಿದಳು. ಪ್ರತೀ ದಿನ ಮುಂಜಾವಿಗೆ ಏಳುತ್ತಿದ್ದ ಪವಿತ್ರ ಆ ದಿನ ಎದ್ದೇಳಲಿಲ್ಲ. ಮನೆಮಂದಿ ಆಕೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಇಲ್ಲ, ಈಕೆ ಎದ್ದೇಳಲೇ ಇಲ್ಲ. ಅವಳು ಅಂಗಾತ ಮಲಗಿ ಕಣ್ಮುಚ್ಚಿಜ್ಜಾಳೆ. ಅಕೆಯ ಶರೀರ ಸಂಪೂರ್ಣವಾಗಿ ಮರಗಟ್ಟಿದೆ ಎಂದು ಭಾಸವಾದಾಗಲೇ ಅವರಿಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋದ ವಿಷಯ ತಿಳಿದು ಬಂದುದು!ಅವರು ತಮಗರಿವಿಲ್ಲದಂತೆ ವಿಚಿತ್ರವಾಗಿ ಕಿರುಚತೊಡಗಿದರು.

ಮುಂಜಾವಿನ ಸವಿನಿದ್ದೆಯಲ್ಲಿದ್ದ ಸುಲೈಮಾನ್ ಸಾಹೇಬರು ಮತ್ತು ಫೆಡ್ರಿಕ್ ಡಿಸೋಜಾರವರ ಮನೆಯವರು ಆ ಕಿರುಚಾಟಕ್ಕೆ ಅತ್ತ ಓಡಿ ಹೋದರು. ಪವಿತ್ರಾಳ ತಾಯಿ ಅವಳ ಪಕ್ಕ ಕೂತು ಎದೆ ಬಡಿದು ಅಳುತ್ತಿದ್ದಳು.'ಅವರು' ವಿಷಯ ಅರ್ಥೈಸಿಕೊಂಡರು. ಈಗ ಎಲ್ಲರಲ್ಲೂ ಮೂಡಿದ್ದು ಒಂದೇ ಪ್ರಶ್ನೆ.'ಪವಿತ್ರಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು?' ಎಂದು. ಆದರೆ ಉತ್ತರ ನಿಗೂಢವಾಗಿತ್ತು. ಟೇಬಲ್ ಮೇಲಿಟ್ಟಿದ್ದ ಪುಸ್ತಕ ಚೆಲ್ಲಾಪಿಲ್ಲಿಯಾಗಿತ್ತು. ವ್ಯವಸ್ಥಿತವಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಂತೂ ಅಲ್ಲ. ಅಕ್ಷಯಕುಮಾರ್‌ಗೆ ಏನೋ ಹೊಳೆದಿರಬೇಕು. ಅವರು ಕೂಡಲೇ ಪುಸ್ತಕದ ಮೇಲೆ ತಡಕಾಡಿದರು. ಅಲ್ಲೇ ಕೆಂಪು ಶಾಯಿಯಲ್ಲಿ ಬರೆದ ಪತ್ರವೊಂದು ಸಿಕ್ಕಿತು.

ಆತ್ಮೀಯ ಬಶೀರ್... ಎಂದೂ ನಿನ್ನ ಮುಖ ನೋಡದ ನಾನು, 'ನನ್ನ ಒಂದು ಬಾಟಲಿ ರಕ್ತ' ನಿನ್ನ ಮುಖ ನೋಡುವಂತೆ ಮಾಡಿತು. ಆ ಒಂದು ಬಾಟಲಿ ರಕ್ತವೇ ನನ್ನ-ನಿನ್ನ ನಡುವೆ ಪ್ರೇಮದ ಸೇತುವೆಯಾಯಿತು. ನಿನ್ನ ಮೇಲೆ ನನಗೆಷ್ಟು ಪ್ರೀತಿ ವಿಶ್ವಾಸವಿತ್ತು ಗೊತ್ತಾ? ಮನೆಯವರಲ್ಲಿ ಈ ವಿಷಯ ತಿಳಿಸಿ 'ನಾವು ಒಂದಾಗಿ ಬಾಳುವ' ಎಂದು ಬಗೆದು ಹತ್ತಿರವಾಗುತ್ತಿದ್ದಂತೆಯೇ ನೀ ನನ್ನಿಂದ ದೂರವಾಗುವ ಮನಸ್ಸು ಮಾಡಿದೆ.ಚಿಂತಿಲ್ಲ... ನಾ ಮಾಡಿದ ಉಪಕಾರವನ್ನು ನಿನ್ನ ಮನೆಯವರು ಸದಾ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಆದರೆ ನಿನಗೆ ಅವರಷ್ಟು ಸೌಜನ್ಯವಾದರೂ ಇದೆಯಾ? ಯಾಕೆ ನೀ ಹೀಗಾದೆ? ಗೊತ್ತಿದೆ ಬಶೀರ್, ನನಗೆಲ್ಲಾ ಗೊತ್ತಿದೆ!! ಅದನ್ನು ನಾನಿಲ್ಲಿ ಪ್ರಸ್ಥಾಪಿಸುವುದಿಲ್ಲ.ಮತ್ತೆ, ಇದೋ ನಾನೀಗ ನನ್ನ ಕೊನೆಯ ಕ್ಷಣ ಎದುರಿಸುತ್ತಿದ್ದೇನೆ. ನಿನ್ನ ನೆನಪಲ್ಲೇ ನಾನು ಕೊನೆಯುಸಿರೆಳೆಯುವೆ. ನೀನು ನಂಬಿದ ನಿನ್ನ ದೇವರು ನಿನ್ನನ್ನು ಒಳ್ಳೆಯದು ಮಾಡಲಿ... ನಮ್ಮ ಪ್ರೀತಿಗೆ ಹುಳಿ ಹಿಂಡಿದವಳಿಗೂ ಒಳ್ಳೆಯದಾಗಲಿ. ನಾನಿನ್ನು ಬರ್ಲಾ...? ಗುಡ್ ಬೈ..

ಸುಲೈಮಾನ್ ಸಾಹೇಬರ ಮುಖ ಕಪ್ಪಾಗಿತ್ತು. ಪತ್ರ ಓದಿದ್ದನ್ನು ಕೇಳುತ್ತಲೇ ಪವಿತ್ರಾಳ ತಾಯಿ 'ಒಂದು ಬಾಟಲಿ ರಕ್ತ' ನನ್ನ ಮಗುವನ್ನು ಬಲಿತೆಗೆದುಕೊಂಡಿತು ಎಂದು ಹೇಳಿ ಚೀರಿದಾಗ ಬಶೀರ್‌ನ ತಾಯಿಗೆ ಆ ನೋವನ್ನು ಸಹಿಸಲಾಗಲಿಲ್ಲ. ಮತ್ತೆ ಅಲ್ಲಿ ಮಾತೆತ್ತುವವರಿಲ್ಲ. ಏನೂ ಅರಿಯದ ಫೆಡ್ರಿಕ್ ಡಿಸೋಜಾರವರು ಅಕ್ಷಯಕುಮಾರ್‌ನ್ನು ನೋಡುತ್ತಾ 'ಸಮಾಧಾನ ಪಟ್ಕೊಳ್ಳಿ ಇವರೇ, ಪವಿತ್ರಾಳ ಸಾವಿಗೆ ಕಾರಣರಾದ ಆ ಮೂರನೇ ವ್ಯಕ್ತಿಯಾರು ಎಂದು ಕಂಡುಹಿಡಿಯುವ, ಮತ್ತೆ ಪೊಲೀಸು, ಶಿಕ್ಷೆ..'ಎಂದು ಹೇಳಿ ನೋವುಂಡರು. ಪಾಪ ಅವರಿಗೇನು ಗೊತ್ತು?

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments