Select Your Language

Notifications

webdunia
webdunia
webdunia
webdunia

ಯಾರ ಮುಡಿಗೆ ಸೌಂದರ್ಯ ಕಿರೀಟ...

ಯಾರ ಮುಡಿಗೆ ಸೌಂದರ್ಯ ಕಿರೀಟ...
ರಶ್ಮಿ.ಪೈ

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು. ಏನಾದರೂ ಹೊಸ ಕಾರ್ಯಕ್ರಮ ಮಾಡಬೇಕು, ಅದು ಎಲ್ಲರನ್ನೂ ಆಕರ್ಷಿಸುವಂತಿರಬೇಕು ಎಂದು ನೇರಳೆ ಅಂಗಿ ತೊಟ್ಟು "ಪೋನಿಟೈಲ್" ಜುಟ್ಟು ಬಿಟ್ಟಿದ್ದ ಸುಂದರಾಂಗಿ ಬದನೆ ಹೇಳಿತು.

ಸ್ವಲ್ಪ ಹೊತ್ತು ಎಲ್ಲಾ ತರಕಾರಿಗಳು ಯೋಚನೆಯಲ್ಲಿ ಮುಳುಗಿದವು. ಸಭೆ ಶಾಂತವಾಗಿತ್ತು, ಕೂಡಲೇ ಬಳುಕು ಸೊಂಟದ ವಯ್ಯಾರಿ ಕ್ಯಾರೆಟ್ " ಸೌಂದರ್ಯ ಸ್ಪರ್ಧೆ" ನಡೆಸಿದರೆ ಒಳ್ಳೆಯದು ಎಂದು ಅಭಿಪ್ರಾಯ ಮುಂದಿಟ್ಟಿತು. ಇದನ್ನು ಕೇಳಿದ ತರಕಾರಿ ರಾಜ ಕುಂಬಳಕಾಯಿಗೆ ಹೊಸ ಐಡಿಯಾ ಸರಿಯೆನಿತು. ಸಭೆಯಲ್ಲಿ ನೆರೆದಿರುವ ಎಲ್ಲಾ ತರಕಾರಿ ಮಹನಿಯರಿಗೆ ಕೇಳುವಂತೆ ಕುಂಬಳ ಕಾಯಿ ಗಟ್ಟಿಯಾಗಿ ಮುಂದಿನ ವಾರ್ಷಿಕೋತ್ಸವಕ್ಕೆ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುವುದಾಗಿ ಪ್ರಕಟಣೆಯನ್ನು ಹೊರಡಿಸಿತು.

ತರಕಾರಿಗಳೆಲ್ಲವೂ ಸೌಂದರ್ಯ ಸ್ಪರ್ಧೆಗೆ ಅಣಿಯಾಗತೊಡಗಿದವು. ಅಂತೂ ವಾರ್ಷಿಕೋತ್ಸವ ಬಂದೇ ಬಿಟ್ಟಿತು. ವಿಶಾಲವಾದ ವೇದಿಕೆಯನ್ನು ಸೌಂದರ್ಯ ಸ್ಪರ್ಧೆಗಾಗಿ ಅಣಿಗೊಳಿಸಲಾಗಿತ್ತು. ನೆರೆದಿದ್ದ ತರಕಾರಿಗಳೆಲ್ಲಾ ತಾ ಮುಂದು ನಾ ಮುಂದು ಎಂಬಂತೆ ಅಲಂಕಾರ ಮಾಡಿ ಬಂದಿದ್ದವು. ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಅಡ್ಡ ಮರದ ಬೊಡ್ಡನಾದ ಹಲಸಿನ ಹಣ್ಣು, ಉದ್ದ ಮರದ ಸನ್ಯಾಸಿ ಅಡಿಕೆ ಹಾಗೂ ಸುಂದರ ಹಲ್ಲಿನ ದಾಳಿಂಬೆ ವೇದಿಕೆಯ ಮುಂದೆ ಆಸೀನವಾಗಿದ್ದವು. ವೇದಿಕೆಗೆ ಬಂದ ಪಡುವಲ ಕಾಯಿ ಕೈಯಲ್ಲಿ ಮೈಕ್ ಹಿಡಿದುಕೊಂಡು ಸ್ಪರ್ಧಾಳುಗಳ ಹೆಸರನ್ನು ಸರದಿಯಂತೆ ಕೂಗ ತೊಡಗಿತು.

ಮೊದಲನೆಯಾದಾಗಿ ಬಿಂಕದ ವಯ್ಯಾರಿ ಹಸಿರು ನಿಲುವಂಗಿ ತೊಟ್ಟ ಬೆಂಡೆಕಾಯಿ ಸೊಂಟ ಬಳುಕಿಸುತ್ತಾ ವೇದಿಕೆಯ ಮುಂದೆ ಬಂದು ತನ್ನ ಸೌಂದರ್ಯವನ್ನು ಪ್ರದರ್ಶಿಸಿತು. ಸಭಿಕರಾಗಿ ನೆರೆದಿದ್ದ ತರಕಾರಿ ತುಂಟರು ಸಿಳ್ಳೆ ಹಾಕಿ, ಯು ಸೋ ಬ್ಯೂಟಿಫುಲ್.. ಎಂದು ಉದ್ಗರಿಸಿದರು. ನಂತರದ ಸಾಲಿನಲ್ಲಿ ನುಣುಪು ಕೆನ್ನೆಯನ್ನು ತೋರಿಸುತ್ತಾ ನೇರಳೆ ಬಣ್ಣದ ಗುಂಡು ಬದನೆಕಾಯಿ ಮತ್ತು ಉದ್ದದ ಹಸಿರು ಬದನೆಕಾಯಿ ಜೋಡಿಯಾಗಿ ಹೆಜ್ಜೆ ಹಾಕಿದವು.

ಬಣ್ಣ ಬಣ್ಣದ ದೀಪಗಳು ವೇದಿಕೆಯಲ್ಲಿ ಝಗಝಗಿಸುತ್ತಿದ್ದವು. ತರಕಾರಿಗಳ ಸುಂದರಿ ಕ್ಯಾರೆಟ್ ರಾಂಪ್ ಮೇಲೆ ಕಾಲಿಟ್ಟ ಕೂಡಲೇ ಸಭಿಕರ ಕರತಾಡನ ಮುಗಿಲು ಮುಟ್ಟಿತು. ಇದರ ಹಿಂದೆಯೇ ತಾನೇನು ಕ್ಯಾರೆಟ್‌ಗಿಂತ ಕಡಿಮೆಯೇ ಎಂಬ ಭಿನ್ನಾಣದಲ್ಲಿ ಮೂಲಂಗಿಯು ಹಸಿರು ಟೋಪಿ ತೊಟ್ಟು ಕ್ಯಾಟ್ ವಾಕ್ ಮಾಡಿತು. ಸುತ್ತಲೂ ಧ್ವನಿವರ್ಧಕಗಳಲ್ಲಿ ಹಾಡು ಮೊಳಗುತ್ತಿರುವಂತೆಯೇ ಹಣ್ಣುಗಳ ಪ್ರಾಯೋಜಕತ್ವದ ಜಾಹೀರಾತು ಕೇಳಿ ಬರುತ್ತಿತ್ತು.

ವೇದಿಕೆಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿರುವವರು ಕಹಿರುಚಿಯ ಹಾಗಲ ಕಾಯಿ ಎಂದು ಮೈಕ್‌ನಲ್ಲಿ ಗಟ್ಟಿಯಾಗಿ ಘೋಷಣೆ. ಕಹಿರುಚಿ ಎಂದು ಹೇಳಿದ್ದಕ್ಕೆ ಹುಸಿ ಮುನಿಸು ಮಾಡಿಕೊಂಡ ಹಾಗಲಕಾಯಿ ತನ್ನ ಜರಿಜರಿ ಹಸಿರಂಗಿಯನ್ನು ತೊಟ್ಟು ಸೌಂದರ್ಯವನ್ನು ಪ್ರದರ್ಶಿಸಿತು. ಇದರ ಹಿಂದೆಯೇ ರಾಂಪಿಗೆ ಬಂದ ಟೋಮೇಟೋ ನನ್ನಕ್ಕಿಂತ ಚಂದ ಇನ್ನಾರು ಎಂಬಂತೆ ತನ್ನ ಅಂಗವನ್ನು ಪ್ರದರ್ಶಿಸಿ, ಕೆಂಪು ಕೆನ್ನೆಯನ್ನುಬ್ಬಿಸಿ ನಗೆಬೀರಿತು.

ಆ ನಂತರ ವೇದಿಕೆಗೆ ಬಂದ ಹಸಿರು ಸೌತೆಕಾಯಿಯು ಬಂಗಾರದ ಬಣ್ಣದ ಸೌತೆಕಾಯಿ ಜೊತೆಗೆ ಬೆಕ್ಕಿನ ನಡಿಗೆಯಿಟ್ಟಾಗ ವೇದಿಕೆಯಲ್ಲಿದ್ದ ಇತರ ಸ್ಪರ್ಧಾಳುಗಳು ಚಕಿತಗೊಂಡರು. ಇದೀಗ ಸೌಂದರ್ಯ ಪ್ರದರ್ಶಿಸಿದವರಲ್ಲಿ ಒಬ್ಬರಿಂದ ಒಬ್ಬರು ಮೇಲು. ಯಾರ ಮುಡಿಗೆ ಸೌಂದರ್ಯ ಕಿರೀಟ ದಕ್ಕುವುದೋ ಎಂಬುದಾಗಿ ಎಲ್ಲರಿಗೂ ಕುತೂಹಲ! ನೆರೆದಿರುವ ಸಭಿಕರು ಇನ್ನೇನೋ ಸ್ಪರ್ಧೆ ಮುಗಿಯಿತು ಅಂದು ಕೊಂಡಿರುವಾಗ ಸಣ್ಣಗಾತ್ರದ ತೊಂಡೆಕಾಯಿ ಚಂದದ ತುಟಿಯಲ್ಲಿ ಅಂದದ ನಗೆ ಬೀರಿ ಎಲ್ಲರನ್ನೂ ಚಕಿತಗೊಳಿಸಿತು.

ಪಡುವಲಕಾಯಿ ತನ್ನ ಕೈಯಲ್ಲಿದ್ದ ಸ್ಪರ್ಧಾಳುಗಳ ಪಟ್ಟಿಯನ್ನೊಮ್ಮೆ ನೋಡಿ ಸಭಿಕರೇ ಈಗಾಗಲೇ ನೀವು ತೆಳು ಶರೀರದ ವಯ್ಯಾರಿಗಳ ಬಳುಕುವ ನಡಿಗೆಯನ್ನು ನೋಡಿದ್ದೀರಿ. ನಿಮ್ಮ ಮುಂದೆ ಇದೀಗ ಹೆಜ್ಜೆಯಿಡಲು ಬರುತ್ತಿದ್ದಾರೆ ತರಕಾರಿಗಳ ರಾಜ ಕುಂಬಳಕಾಯಿ..ಎಂದು ಗಟ್ಟಿಯಾಗಿ ಉದ್ಗೋಷಿಸಿತು. ಎಲ್ಲರ ಕಣ್ಣು ವೇದಿಕೆಯ ಮೇಲೆ ನೆಟ್ಟಿತು. ಅಬ್ಬರದ ಸಂಗೀತದ ನಡುವೆ ಕುಂಬಳಕಾಯಿ ಮುಖ ತುಂಬಾ ಪೌಡರ್ ಮೆತ್ತಿಕೊಂಡು ಬಂದು ನಿಂತಿತ್ತು. ದೊಡ್ಡ ಗಾತ್ರದ ದೇಹವನ್ನು ಬಳುಕಿಸಲಾರದೆ ವೇದಿಕೆಯ ಮೇಲೆ ಹೊರಳಾಡಿತು. ಕೆಲವರು ಈ ಪ್ರದರ್ಶನವನ್ನು ನೋಡಿ ನಕ್ಕರೆ ಕೆಲವರಂತೂ ತರಕಾರಿ ರಾಜನ ಕಸರತ್ತಿಗೆ ಹೋ...ಎಂದು ಪ್ರೋತ್ಸಾಹ ನೀಡಿದರು.

ಅಂತೂ ಒಟ್ಟಿನಲ್ಲಿ ಸೌಂದರ್ಯ ಸ್ಪರ್ಧೆ ಮುಕ್ತಾಯಗೊಂಡಿತು. ಇನ್ನು ಸೌಂದರ್ಯ ರಾಣಿ ಯಾರೆಂದು ಘೋಷಿಸುವುದು ಮಾತ್ರ ಬಾಕಿ ಇತ್ತು. ಸ್ಪರ್ಧಾ ನಂತರ ನಿರ್ಣಾಯಕರು ಪರಸ್ಪರ ಮಾತನಾಡಿಕೊಂಡು ಒಂದು ನಿರ್ಣಯಕ್ಕೆ ಬಂದ ಮೇಲೆ ಪುನಃ ಮೈಕ್ ಕೈಗೆತ್ತಿಕೊಂಡ ಪಡುವಲ ಕಾಯಿ, ಪ್ರಿಯ ತರಕಾರಿ ಬಾಂಧವರೇ..ಇಲ್ಲಿ ನಡೆದ ಅತೀ ಕುತೂಹಲಕರವಾದ ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಲು ನಾನು ನಮ್ಮ ವಿಶೇಷ ಅತಿಥಿಯಾದ ಬಟಾಟೆ ಗುಂಡನನ್ನು ವೇದಿಕೆಗೆ ಆಹ್ವಾನಿಸುತ್ತಿದ್ದೇನೆ ಎಂದು ಘೋಷಿಸಿತು.

ಕೈಯಲ್ಲಿ ವಿಜೇತರ ಹೆಸರಿನ ಪಟ್ಟಿಯನ್ನು ಹಿಡಿದು ಬಂದ ಬಟಾಟೆ ಗುಂಡ ಇಂದಿನ ವಿಜಯಿ ಸುಂದರಾಂಗಿ "ಟೊಮೇಟೋ" ಎಂದು ಕೂಗಿದ ಕೂಡಲೇ ಟೊಮೇಟೋ ಬಂಧುಗಳೆಲ್ಲ ವೇದಿಕೆಗೆ ಹಾರಿ ಕುಣಿದು ಕುಪ್ಪಳಿಸ ತೊಡಗಿದರು. ವೇದಿಕೆಯೆಲ್ಲಾ ಟೊಮೇಟೋ ದಾಳಿಗೆ ಅಲ್ಲೋಲಕಲ್ಲೋಲವಾಯಿತು. ಒಂದರ ಮೇಲೊಂದು ಟೊಮೇಟೋಗಳು ವೇದಿಕೆಗೆ ಜಿಗಿದು ನರ್ತನವಾಡ ತೊಡಗಿದಾಗ ವೇದಿಕೆಯಲ್ಲಿದ್ದ ಮಹನಿಯರೆಲ್ಲಾ ಹೆದರಿ ಓಡತೊಡಗಿದರು. ಟೊಮೇಟೋಗಳಿಂದ ತುಂಬಿದ ವೇದಿಕೆಯಲ್ಲಿ ಕೊನೆಗೆ ಯಾರೂ ಉಳಿಯದೇ ಇದ್ದುದರಿಂದ ತರಕಾರಿ ಸೌಂದರ್ಯ ಸ್ಪರ್ಧೆಯು ಅಲ್ಲಿಗೆ ಮುಕ್ತಾಯಗೊಂಡಿತು.



Share this Story:

Follow Webdunia kannada